ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಪರಿಚಯ ಹಾಗೂ ಸೂಚನಾ ಫಲಕಗಳಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನಮಾನವನ್ನು ಒದಗಿಸಲು ಕೇಂದ್ರ ಸರ್ಕಾರವು ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹರ್ಷ ವ್ಯಕ್ತಪಡಿಸಿದ್ದಾರೆ.
೨೦೨೪ರ ಡಿಸೆಂಬರ್ ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗವು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕನ್ನಡವು ಕರ್ನಾಟಕದ ಆಡಳಿತ, ಜನಜೀವನ ಮತ್ತು ಸಾಂಸ್ಕೃತಿಕ ಅಸ್ತಿತ್ವದ ಪ್ರಮುಖ ಭಾಷೆಯಾಗಿರುವ ಕಾರಣ ರಾಜ್ಯದಲ್ಲಿರುವ ಕೇಂದ್ರ ಸಂರಕ್ಷಿತ ಸ್ಮಾರಕಗಳ ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ನೀಡಬೇಕೆಂದು ಸಲ್ಲಿಸಿದ ಮನವಿ ಹಾಗೂ ಅಂದಿನ ಸಕಾರಾತ್ಮಕ ಸ್ಪಂದನೆಯನ್ನು ಸ್ಮರಿಸಿರುವ ಬಿಳಿಮಲೆ, ಈಗ ಕರ್ನಾಟಕದ ಐತಿಹಾಸಿಕ ಸ್ಮಾರಕಗಳ ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಸ್ಥಾನವನ್ನು ಕಲ್ಪಿಸುವ ಭರವಸೆ ಈಡೇರುವ ಹಂತ ತಲುಪಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಭಾಷೆಯ ಗೌರವವನ್ನು ಪ್ರತಿಬಿಂಬಿಸುವ ಈ ಮಹತ್ವದ ಕಾರ್ಯವು ಐತಿಹಾಸಿಕ ಬಾದಾಮಿಯಿಂದ ಪ್ರಾರಂಭವಾಗಿರುವುದಾಗಿ ಮಾಹಿತಿ ನೀಡಿರುವ ಬಿಳಿಮಲೆ, ಮುಂದಿನ ದಿನಗಳಲ್ಲಿ ನಾಡಿನೆಲ್ಲೆಡೆ ಇರುವ ಐತಿಹಾಸಿಕ ಸ್ಮಾರಕಗಳಿಗೆ ವಿಸ್ತರಣೆಯಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಕನ್ನಡಿಗರಿಗೆ ತಮ್ಮದೇ ಭಾಷೆಯಲ್ಲಿ ಸ್ಮಾರಕಗಳ ಇತಿಹಾಸ ಮತ್ತು ಮಹತ್ವವನ್ನು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದಿರುವ ಬಿಳಿಮಲೆ ಇದು ಕನ್ನಡ ಭಾಷೆಯ ಗೌರವ ಮತ್ತು ಬಳಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಈ ಭಾಷಾಪರವಾದ ಕ್ರಮಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕನ್ನಡದ ಹಕ್ಕು ಮತ್ತು ಸ್ಥಾನಮಾನಕ್ಕೆ ಸಂಬಂಧಿಸಿದ ಇಂತಹ ವಿಷಯಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮುಂದೆಯೂ ಇದೇ ರೀತಿಯಲ್ಲಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಬಿಳಿಮಲೆ ಹೇಳಿದ್ದಾರೆ.
