ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್ ಬಳಿ ಇರುವ ರಾಮಲಕ್ಷ್ಮೀ ಸಭಾಭವನದಲ್ಲಿ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳ ಸಮಾರಂಭದ ವೇಳೆ ಕಾರಿಡಾರ್‌ನ ಶಿಥಿಲಗೊಂಡ ತಡೆಗೋಡೆ ಕುಸಿದುಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೆದುಳು ನಿಷ್ಕ್ರಿಯ ಸ್ಥಿತಿಯಲ್ಲಿದ್ದ ವಿದ್ಯಾರ್ಥಿ ಮಹಮ್ಮದ್ ಸಮಾಜ್ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಇತರೆ ನಾಲ್ವರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದು, ಮೃತ ವಿದ್ಯಾರ್ಥಿ ಮಹಮ್ಮದ್ ಸಮಾಜ್ ಅವರ ತಂದೆ ನೀಡಿದ ದೂರಿನ ಮೇರೆಗೆ ಕಾರ್ಯಕ್ರಮದ ಆಯೋಜಕರು ಹಾಗೂ ಸಭಾಭವನದ ಕಟ್ಟಡ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನದಟ್ಟಣೆಯಿಂದ ಗೋಡೆ ಕುಸಿತ, ಕೆಳಗೆ ಬಿದ್ದ ವಿದ್ಯಾರ್ಥಿಗಳು: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿರುವ ಪ್ರಕಾರ, ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಸಭಾಭವನದಲ್ಲಿ ವಿದ್ಯಾರ್ಥಿಗಳು ತಮ್ಮ ಪದಾಧಿಕಾರಿಗಳ ಸಮಾರಂಭವನ್ನು ಆಚರಿಸಲು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಸಭಾಭವನದಲ್ಲಿ ಭಾರಿ ಜನದಟ್ಟಣೆ ಉಂಟಾಗಿತ್ತು. ಕಾರಿಡಾರ್‌ನಲ್ಲಿ ಹೊರಗಡೆ ನಿಂತಿದ್ದ ಕೆಲ ವಿದ್ಯಾರ್ಥಿಗಳು ಅಲ್ಲಿನ ಆಸರೆ ಗೋಡೆಗೆ ಒರಗಿ ನಿಂತಿದ್ದರು. ಆದರೆ ಆ ಗೋಡೆ ತೀರಾ ದುರ್ಬಲ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಕಾರಣ, ಭಾರ ತಾಳಲಾರದೆ ಏಕಾಏಕಿ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಕೆಳಗೆ ನಿಂತಿದ್ದ ಮಹಮ್ಮದ್ ಸಮಾಜ್ ಮೇಲೆ ಕುಸಿದು ಬಿದ್ದ ಕಟ್ಟಡದ ಭಾಗಗಳ ಸಮೇತ ವಿದ್ಯಾರ್ಥಿಗಳು ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದರು.
ರಾತ್ರಿ ವೇಳೆ ವಿದ್ಯಾರ್ಥಿ ಸಾವು ದೃಢ: ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಒಟ್ಟು 5 ಮಂದಿ ವಿದ್ಯಾರ್ಥಿಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಬ್ರೈನ್ ಡೆಡ್ ಸ್ಥಿತಿಯಲ್ಲಿದ್ದ ವಿದ್ಯಾರ್ಥಿ ಮಹಮ್ಮದ್ ಸಮಾಜ್ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ವೈದ್ಯರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಉಳಿದ ನಾಲ್ವರು ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

