ಆರೋಗ್ಯ ಸುದ್ದಿ

ರಾಜ್ಯದಲ್ಲಿ 11 ಲಕ್ಷ ಸಾಕು ಪ್ರಾಣಿಗಳಿಗೆ ಉಚಿತ ರೇಬೀಸ್ ಲಸಿಕೆ ನೀಡುವ ಗುರಿ: ಸಚಿವ ಸಿ. ಪುಟ್ಟರಂಗಶೆಟ್ಟಿ

Share It

  • 2030ರ ವೇಳೆಗೆ ರೇಬೀಸ್ ಮುಕ್ತ ಸಮಾಜ ನಿರ್ಮಾಣಕ್ಕೆ ‘ಒನ್ ಹೆಲ್ತ್’ ಮಾದರಿ ಅನಿವಾರ್ಯ: ಕಾರ್ಯದರ್ಶಿ ವಿನೋತ್ ಪ್ರಿಯಾ

ಬೆಂಗಳೂರು (28 ಸೆಪ್ಟೆಂಬರ್ 2026) : ರೇಬೀಸ್ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ (2026-27) ಅಸ್ಕಾಡ್ (ASCAD) ಯೋಜನೆಯಡಿ ರಾಜ್ಯಾದ್ಯಂತ ಒಟ್ಟು 11 ಲಕ್ಷ ಸಾಕು ಪ್ರಾಣಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಮಾನ್ಯ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಕರ್ನಾಟಕ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ (IISc), ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು (KVAFSU), BeST Cluster, ಕಿಮ್ಸ್ (KIMS) ಹಾಗೂ ಮಿಷನ್ ರೇಬೀಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಐಐಎಸ್‌ಸಿಯ ಎ.ವಿ. ರಾಮಾರಾವ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ವಿಶ್ವ ರೇಬೀಸ್ ದಿನ – 2026” ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

“ರೇಬೀಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮತ್ತು ನಾಯಿಗಳಿಗೆ ಸಕಾಲದಲ್ಲಿ ಲಸಿಕೆ ನೀಡುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ” ಎಂದರು.

ವ್ಯಾಪಕ ಜಾಗೃತಿ ಹಾಗೂ ಲಸಿಕಾಕರಣ:

  • 2024-25: 5,241 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ, 6,62,183 ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಲಾಗಿತ್ತು.
  • 2025-26: 9,175 ಶಿಕ್ಷಣ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ ನಡೆಸಿ, 9,51,593 ಸಾಕು ಪ್ರಾಣಿಗಳಿಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ.
  • 2026-27: ಪ್ರಸಕ್ತ ಸೆಪ್ಟೆಂಬರ್ ಮಾಹೆಯಲ್ಲಿಯೇ 7,200 ಶಾಲಾ-ಕಾಲೇಜುಗಳಲ್ಲಿ ಸುಮಾರು 5 ಲಕ್ಷ ವಿದ್ಯಾರ್ಥಿಗಳು ಮತ್ತು 32,000 ಶಿಕ್ಷಕರಿಗೆ ರೇಬೀಸ್ ಕುರಿತು ಸಮಗ್ರ ಅರಿವು ಮೂಡಿಸಲಾಗಿದೆ. ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ 11 ಲಕ್ಷ ಸಾಕು ಪ್ರಾಣಿಗಳಿಗೆ ಲಸಿಕೆ ನೀಡುವ ಬೃಹತ್ ಅಭಿಯಾನ ಆರಂಭವಾಗಲಿದೆ.

ಮುಂಚೂಣಿ ಸಿಬ್ಬಂದಿಗೆ ಅಭಯರಾಬ್ ಲಸಿಕೆ: ಲಸಿಕಾ ಅಭಿಯಾನದಲ್ಲಿ ತೊಡಗುವ ಇಲಾಖೆಯ ಮುಂಚೂಣಿ ಕಾರ್ಯಕರ್ತರ ರಕ್ಷಣೆಗಾಗಿ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಸಂಸ್ಥೆಯು ‘ಅಭಯರಾಬ್’ (ABHAYRAB) ಲಸಿಕೆಯನ್ನು ಒದಗಿಸುತ್ತಿದೆ. ಜೊತೆಗೆ WVS ಮಿಷನ್ ರೇಬೀಸ್ ಮತ್ತು CARE ಸಂಸ್ಥೆಯು 1 ಲಕ್ಷ ಡೋಸ್ ಲಸಿಕೆಗಳನ್ನು ಪ್ರಾಯೋಜಿಸಿದೆ.

ಸಮಾರಂಭದಲ್ಲಿ ಮಾತನಾಡಿದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ವಿನೋತ್ ಪ್ರಿಯಾ R. (IAS) ಅವರು, “ಈ ವರ್ಷದ ವಿಶ್ವ ರೇಬೀಸ್ ದಿನದ ಘೋಷವಾಕ್ಯ ‘ಸ್ಟ್ರಾಂಗರ್ ಟುಗೆದರ್’ (Stronger Together) ಆಗಿದೆ. ಮಾನವ ಆರೋಗ್ಯ, ಪ್ರಾಣಿ ಆರೋಗ್ಯ ಹಾಗೂ ಪರಿಸರವನ್ನು ಒಗ್ಗೂಡಿಸುವ ‘ಒನ್ ಹೆಲ್ತ್’ (One Health) ಪರಿಕಲ್ಪನೆಯ ಮೂಲಕ ಮಾತ್ರ ರೇಬೀಸ್ ಸಂಪೂರ್ಣ ನಿರ್ಮೂಲನೆ ಸಾಧ್ಯ. 2030ರ ವೇಳೆಗೆ ಶ್ವಾನಗಳಿಂದ ಹರಡುವ ರೇಬೀಸ್‌ನಿಂದ ಯಾವುದೇ ಮಾನವ ಸಾವು ಸಂಭವಿಸಬಾರದು ಎಂಬ ಜಾಗತಿಕ ಗುರಿಯನ್ನು ತಲುಪಲು ಕರ್ನಾಟಕ ಬದ್ಧವಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಐಎಸ್‌ಸಿ ಬಯೋಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಮತ್ತು ಅಧ್ಯಕ್ಷರಾದ ಡಾ. ಉತ್ಪಲ್ ಎಸ್. ಟಾಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಆಯುಕ್ತರಾದ ಶ್ರೀ ಲಿಂಗರಾಜ S.S. (IFS), KVAFSU ಕುಲಪತಿ ಪ್ರೊ. ಕೆ.ಸಿ. ವೀರಣ್ಣ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ನಿರ್ದೇಶಕ ಡಾ. ಪಿ. ಶ್ರೀನಿವಾಸು, ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಶ್ರೀ ಯಶವಂತ್ ಶೇಣೈ (IIS), ಪಶುವೈದ್ಯಕೀಯ ಕಾಲೇಜು ಡೀನ್ ಪ್ರೊ. ಆರ್. ನಾಗರಾಜ, ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಡಾ. ಎನ್. ಎಸ್. ಎನ್. ಭಾರ್ಗವ, ಕಿಮ್ಸ್ (KIMS) ಕಮ್ಯೂನಿಟಿ ವೈದ್ಯಕೀಯ ವಿಭಾಗದ ಪ್ರೊ. ಡಿ.ಎಚ್. ಅಶ್ವಥ್‌ನಾರಾಯಣ ಹಾಗೂ CARE ಸಂಸ್ಥಾಪಕರಾದ ಶ್ರೀಮತಿ ಸುಧಾ ನಾರಾಯಣ್ ಉಪಸ್ಥಿತರಿದ್ದರು.


Share It

You cannot copy content of this page