ಬೆಂಗಳೂರು: ಲೋಕಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 19 ಮಂದಿ ನೂತನ ಸಚಿವರುಗಳಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ 19 ನೂತನ ಸಚಿವರುಗಳು ಪ್ರಮಾಣವಚನ ಸ್ವೀಕಾರ ಮಾಡಿದರು. ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರು ಪ್ರಮಾಣವಚನ ಸ್ವೀಕಾರ ಮಾಡಿಲ್ಲ. ಇವರ ವಿಚಾರವಾಗಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಸದ್ಯ ಪ್ರಮಾಣವಚನ ಸ್ವೀಕಾರ ಮಾಡಿಲ್ಲ. ಸ್ವತ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಾಯತ್ರಿ ಶಾಂತೇಗೌಡರಿಗೆ ಪ್ರಮಾಣವಚನ ಸ್ವೀಕರಿಸದಂತೆ ತಾಕೀತು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಹೀಗಾಗಿ ಅವರನ್ನು ಬಿಟ್ಟು ಉಳಿದಂತೆ 19 ಮಂದಿ ಡಿ.ಕೆ. ಶಿವಕುಮಾರ್ ಮಂತ್ರಿಮಂಡಲದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಮೊದಲಿಗೆ ಸಚಿವರಾಗಿ ಅಜಯ್ ಧರ್ಮಸಿಂಗ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಬಳಿಕ ಹೆಚ್.ಸಿ. ಬಾಲಕೃಷ್ಣ, ಕೆ.ಎಸ್. ಬಸವಂತಪ್ಪ, ಬಸವರಾಜ್ ರಾಯರೆಡ್ಡಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮಣ್ ಸಂಗಪ್ಪ ಸವದಿ, ಮಧು ಬಂಗಾರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಬಿ. ನಾಗೇಂದ್ರ ಪ್ರಮಾಣವಚನ ಸ್ವೀಕಾರ ಮಾಡಿದರು.
ಬಳಿಕ ಪಿ.ಎಂ. ನರೇಂದ್ರಸ್ವಾಮಿ ಡಾ. ಅಂಬೇಡ್ಕರ್, ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಿ.ಪುಟ್ಟರಂಗ ಶೆಟ್ಟಿ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ರುದ್ರಪ್ಪ ಲಮಾಣಿ, ಸಂತೋಷ್ ಲಾಡ್, ಕೆ.ಎಂ. ಶಿವಲಿಂಗೇಗೌಡ, ಶಿವರಾಜ್ ತಂಗಡಗಿ, ವಿಜಯಾನಂದ ಕಾಶಪ್ಪನವರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಕೊನೆಯದಾಗಿ ಜಮೀರ್ ಅಹಮದ್ ಖಾನ್ ಅಲ್ಲಾ ಹಾಗೂ ತಾಯಿ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಮಾಣವಚನ ಓದಿದರು. ವಂದೇ ಮಾತರಂ ಗೀತೆ ಬಳಿಕ ಜನ ಗಣ ಮನ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

