ಶಕ್ತಿ ಯೋಜನೆಯಿಂದ ಈವರೆಗೆ 200 ಕೋಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ!
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಯಾದ ಶಕ್ತಿ ಯೋಜನೆ ಯಶೋಗಾಥೆ ಬರೆದಿದೆ. ಮಹತ್ವದ ಶಕ್ತಿ ಯೋಜನೆಯಡಿ ಈವರೆಗೂ ಮಹಿಳೆಯರು ಮಾಡಿದ ಪ್ರಯಾಣ ಸಂಖ್ಯೆ 200 ಕೋಟಿ ದಾಟಿದೆ.
ಜೂನ್ 11 ಕ್ಕೆ ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಚಾಲನೆ ಸಿಕ್ಕಿತ್ತು. ಅಲ್ಲಿಂದ ನಿತ್ಯ ಮಹಿಳೆಯರು ಉಚಿತ ಬಸ್ ಪ್ರಯಾಣ ಪಡೆಯುತ್ತಿದ್ದು, ಕೆಎಸ್ಸಾರ್ಟಿಸಿ ಮೂಲಗಳ ಪ್ರಕಾರ 200 ಕೋಟಿ ಮಹಿಳೆಯರು ಈವರೆಗೂ ಪ್ರಯಾಣಿಸಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದಂತೆ ಅಧಿಕಾರ ಹಿಡಿದ ನಂತರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆ ರಾಜ್ಯಾದ್ಯಂತ ಸೂಪರ್ ಹಿಟ್ ಆಗಿದೆ.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದು ತಿಂಗಳೊಳಲ್ಲೇ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ‘ಶಕ್ತಿ ಯೋಜನೆ’ಗೆ ಚಾಲನೆ ನೀಡಲಾಗಿತ್ತು. ಈ ಯೋಜನೆಯು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನಪ್ರಿಯಗೊಂಡು ಮಹಿಳೆಯರು, ವಿದ್ಯಾರ್ಥಿನಿಯರು, ಬಾಲಕಿಯರು ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣದ ಆನಂದ ಅನುಭವಿಸುತ್ತಿದ್ದಾರೆ.