ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ದಶಕಗಳ ಕಾಲ ರಾಜ್ಯವನ್ನು ಆಳಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆ ಭೇದಿಸಿ, ತಮಿಳು ಚಿತ್ರರಂಗದ ‘ದಳಪತಿ’ ವಿಜಯ್ ಈಗ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಆರಂಭಿಸಿದ್ದಾರೆ.
ಸಿಎಂ ಸ್ಥಾನ ಅಲಂಕರಿಸುತ್ತಿದ್ದಂತೆ ಟಿವಿಕೆ ಪಕ್ಷದ ಸಂಸ್ಥಾಪಕರೂ ಆದ ವಿಜಯ್, ತಮ್ಮ ಪ್ರಣಾಳಿಕೆಯಂತೆ ಗೃಹ ಬಳಕೆಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಪಡೆ ಸ್ಥಾಪಿಸುವ ಮತ್ತು ರಾಜ್ಯಾದ್ಯಂತ ಮಾದಕವಸ್ತು ಕಳ್ಳಸಾಗಣೆ ವಿರೋಧಿ ಘಟಕಗಳನ್ನು ಪ್ರಾರಂಭಿಸುವ ಕಡತಗಳಿಗೆ ಸಹಿ ಹಾಕಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ, “ನಿಜವಾದ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ”ಕ್ಕೆ ಬದ್ಧವಾಗಿರುವ ಆಡಳಿತದ ಹೊಸ ಯುಗ ಈಗ ಪ್ರಾರಂಭವಾಗಿದೆ” ಎಂದು ವಿಜಯ್ ಸಾರಿದರು.
ಶಕ್ತಿ ಕೇಂದ್ರಗಳಿರಲ್ಲ- ವಿಜಯ್: ಅಲ್ಲದೇ ತಮ್ಮನ್ನು ಹೊರತುಪಡಿಸಿ ಬೇರೆ ಯಾವುದೇ ಶಕ್ತಿ ಕೇಂದ್ರಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನೇ ಏಕೈಕ ಅಧಿಕಾರ ಕೇಂದ್ರವಾಗಿರುತ್ತೇನೆ ಎಂಬುದನ್ನು ಒತ್ತಿ ಹೇಳಿದರು. ಇದೇ ವೇಳೆ, ಸರ್ಕಾರ ರಚಿಸಲು ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕಾಗಿ ಕಾಂಗ್ರೆಸ್, ವಿಸಿಕೆ, ಐಯುಎಂಎಲ್ ಹಾಗು ಎಡ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದ್ದಲ್ಲದೇ, ವಿಶೇಷವಾಗಿ ಧನ್ಯವಾದ ತಿಳಿಸಿದರು.

