ಅಪರಾಧ ಜಿಲ್ಲೆ

ಮಹಿಳೆಯ ಬ್ಯಾಂಕ್​ ಖಾತೆಯಿಂದ ₹18.24 ಲಕ್ಷ  ಸೈಬರ್ ವಂಚನೆ

Share It

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಳ‌ ಆಗುತ್ತಿದ್ದು, ಜನವರಿಯಿಂದ ಇಲ್ಲಿಯತನಕ 29 ಪ್ರಕರಣಗಳು ದಾಖಲಾಗಿವೆ. OTP ಇಲ್ಲ, APK ಲಿಂಕ್ ಸಹ ಇಲ್ಲ. ಆದ್ರೆ ಮಹಿಳೆಯೊಬ್ಬರ ಬ್ಯಾಂಕ್​ ಖಾತೆಯಿಂದ 18.24 ಲಕ್ಷ ರೂ. ಮಾಯ ಆಗಿದ್ದು ಹೇಗೆ? ಅನ್ನೋದರ ಕುರಿತ ವರದಿ ಇಲ್ಲಿದೆ..

ಸೈಬರ್ ಕ್ರೈಮ್​ ವಂಚಕರ ಮೋಸಕ್ಕೆ ಜಿಲ್ಲೆಯ ಜನತೆ ಬೆಚ್ಚಿಬಿದ್ದಿದ್ದು, ಇದೀಗ ನಗರದ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಗೆ ಯಾವುದೇ ಆಪ್‌ನ ಲಿಂಕ್ ಬಂದಿಲ್ಲ, ಒಟಿಪಿಯೂ ಬಂದಿಲ್ಲ. ಆದರೂ ಹಂತ ಹಂತವಾಗಿ 18 ಲಕ್ಷ ರೂ. ಬ್ಯಾಂಕ್ ಖಾತೆಯಿಂದ ಮಾಯವಾಗಿದೆ. ಇದು ಸೈಬರ್ ವಂಚಕರ ಹೊಸ ವರಸೆಯಾಗಿದೆ.

ಪ್ರಮುಖ ಖಾಸಗಿ ಬ್ಯಾಂಕ್‌ವೊಂದರಲ್ಲಿ ಖಾತೆಯಿಂದ ಹಂತ ಹಂತವಾಗಿ ಒಟ್ಟು 18.24 ಲಕ್ಷ ರೂಪಾಯಿ ಹಣವನ್ನು ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ಬ್ಯಾಂಕ್ ಪರಿಶೀಲನೆ ವೇಳೆ ಪತ್ತೆಯಾಗಿದೆ.

ಮಹಿಳೆಯ ಖಾತೆಯಿಂದ ಮಾರ್ಚ್ 4 ರಿಂದ ಎಪ್ರಿಲ್ 21ರ ವರೆಗೆ ವಿವಿಧ ದಿನಾಂಕಗಳಲ್ಲಿ ಹಣ ಕಡಿತವಾಗಿದೆ. ಈ ಮಹಿಳೆಯ ಖಾತೆಯಿಂದ ಹಲವು ಅಪರಿಚಿತ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ವಿಶೇಷವೆಂದರೆ, ಹಣ ವರ್ಗಾವಣೆ ನಡೆದಿದ್ದರೂ ಮೊಬೈಲ್‌ಗೆ ಯಾವುದೇ OTP, ಅಲರ್ಟ್ ಸಂದೇಶ ಅಥವಾ ಅನುಮಾನಾಸ್ಪದ APK ಲಿಂಕ್ ಬಂದಿಲ್ಲ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಖಾತೆಯಿಂದ ಹಣ ಕಣ್ಮರೆ: ಸಾಮಾನ್ಯವಾಗಿ ಸೈಬರ್ ವಂಚಕರು OTP ಪಡೆದು ಅಥವಾ ನಕಲಿ ಲಿಂಕ್‌ಗಳನ್ನು ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ, ಯಾವುದೇ ರೀತಿಯ ಎಚ್ಚರಿಕೆ ಇಲ್ಲದೆ ಬ್ಯಾಂಕ್ ಖಾತೆಯಿಂದ ಹಣ ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗಲೇ ವಂಚನೆ ನಡೆದಿರುವುದು ಮಹಿಳೆಗೆ ತಿಳಿದಿದೆ.

ಈ ಸಂಬಂಧ ಮಹಿಳೆ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸುವಂತೆ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಣ ವರ್ಗಾವಣೆಯಾದ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದು, ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳು ಮತ್ತು ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಸೈಬರ್ ವಂಚನೆ ಹೆಚ್ಚಳ: ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಿವೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 29 ವಿವಿಧ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿವರೆಗೆ ಮೋಸಕ್ಕೊಳಗಾದವರು ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಹಣ ದ್ವಿಗುಣಗೊಳಿಸುವ ಆಮಿಷ, ಆನ್‌ಲೈನ್ ಹೂಡಿಕೆ ವಂಚನೆ, ನಕಲಿ ಲಿಂಕ್‌ಗಳು, ಬ್ಯಾಂಕ್ KYC ಅಪ್ಡೇಟ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳೇ ಹೆಚ್ಚಾಗಿವೆ. ಈವರೆಗೆ ದಾಖಲಾಗಿರುವ 29 ಪ್ರಕರಣಗಳಲ್ಲಿ 6 ಪ್ರಕರಣಗಳನ್ನು ಮಾತ್ರ ಪೊಲೀಸರು ಭೇದಿಸಿದ್ದು, ಉಳಿದ ಪ್ರಕರಣಗಳ ತನಿಖೆ ಮುಂದುವರೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಠಾಣೆಯ ಠಾಣಾಧಿಕಾರಿ ಪ್ರತಿಕ್ರಿಯಿಸಿದ್ದು, ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಕರೆಗಳು, ಹೂಡಿಕೆಯ ಆಮಿಷಗಳು, ಬ್ಯಾಂಕ್ ಮಾಹಿತಿ ಕೇಳುವ ಸಂದೇಶಗಳು ಹಾಗೂ ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್ ಮತ್ತು ಸೈಬರ್ ಸಹಾಯವಾಣಿ 1930ಕ್ಕೆ ಸಂಪರ್ಕಿಸಿ ಎಂದು ಮಾಹಿತಿ ನೀಡಿದ್ದಾರೆ.


Share It

You cannot copy content of this page