ಬೆಂಗಳೂರು: ಜಿ ರಾಮ್ ಜಿ ಕಾಯ್ದೆ ಸಂಬಂಧ ಇನ್ನೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದ ಕಾರಣ ರಾಜ್ಯ ಸರ್ಕಾರ ನ್ಯಾಯಾಲಯದ ಕದ ತಟ್ಟಲು ತೀರ್ಮಾನಿಸಿದೆ. ಈ ಸಂಬಂಧ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕೇಂದ್ರ ನೂತನ ಜಿ ರಾಮ ಜಿ ಕಾಯ್ದೆ ಜಾರಿ ಸಂಬಂಧ ಇನ್ನೂ ಅಧಿಸೂಚನೆ ಹೊರಡಿಸಿಲ್ಲ ಮತ್ತು ಪರ್ಯಾಯವಾದ ಯಾವುದೇ ವ್ಯವಸ್ಥೆಯನ್ನೂ ಮಾಡದೇ ಇರುವುದರಿಂದ ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 (MGNREGA)ನ್ನು ಮುಂದುವರೆಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಈ ಕುರಿತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಕೇಂದ್ರದ ನಿಲುವು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳನ್ನು ದಮನಿಸಿದಂತೆ ಆಗಿರುವುದರಿಂದ ಈ ವಿಚಾರವನ್ನೂ ಸಹ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಗ್ರಾಮೀಣ ಭಾಗದವರಿಗೆ ಇದು ಮಹತ್ವದ ಯೋಜನೆಯಾಗಿದೆ. ಮೇ ಬಂದರೂ ಕೂಡ ಜಿ ರಾಮ್ ಜಿ ಯೋಜನೆ ಸಂಬಂಧ ಇದುವರೆಗೆ ಅಧಿಸೂಚನೆ ಆಗಿಲ್ಲ. ಕೇಂದ್ರ ಸರ್ಕಾರ ಮನರೇಗಾದಡಿ ಬಾಕಿ ಕೆಲಸಗಳನ್ನು ಮುಂದುವರಿಸುವ ಬಗ್ಗೆ ಸುತ್ತೋಲೆ ಹೊರಡಿಸಿದೆ. ಆದರೆ, ಅದಕ್ಕೆ ಬೇಕಾದ ಯಾವುದೇ ಹಣಕಾಸು ಕೊಟ್ಟಿಲ್ಲ. ಮುಂದೆ ಮಳೆ ಕೊರತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಆದರೆ ಕೇಂದ್ರ ಬಡವರ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ಕದ ತಟ್ಟಲು ತೀರ್ಮಾನಿಸಿದೆ ಎಂದು ವಿವರಿಸಿದರು.

