ಬೆಳಗಾವಿ: ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಗಾಣಿಗ ಸಮಾಜದ ಶಾಸಕರಿಗೆ ಯೋಗ್ಯ ಸ್ಥಾನಮಾನ ನೀಡುವಂತೆ ಜಿಲ್ಲಾ ಗಾಣಿಗ ಸಮಾಜ ಒತ್ತಾಯಿಸಿದೆ. ಬೆಳಗಾವಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರಾದ ರಾಮಪ್ಪ ಉಟಗಿ ಅವರು ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಗಾಣಿಗೆ ಸಮಾಜಕ್ಕೆ ಸೂಕ್ತ ಸ್ಥಾನಮಾನ ನೀಡಲೇಬೇಕು ಎಂದು ಹಕ್ಕೋತ್ತಾಯ ಮಂಡಿಸಿದ್ದಾರೆ.
ಕರ್ನಾಟಕದಲ್ಲಿ (ಲಿಂಗಾಯತ ಗಾಣಿಗ, ಕಲಶೆಟ್ಟಿ ಗಾಣಿಗ, ಪಂಚಮ ಗಾಣಿಗ, ದೇವ ಗಾಣಿಗ, ಸಜ್ಜನ ಗಾಣಿಗ, ಕರೆ ಗಾಣಿಗ, ಶೆಟ್ಟಿ ಗಾಣಿಗ, ತೇಲಿ ಗಾಣಿಗ, ಜ್ಯೋತಿಪಣ ಗಾಣಿಗ, ಹೈದ್ರಾಬಾದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಈ ರೀತಿ ಎಲ್ಲಾ ಪಂಗಡಗಳು ಸೇರಿ ಒಟ್ಟು 40 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯನ್ನು ಗಾಣಿಗ ಸಮುದಾಯ ಹೊಂದಿದೆ ಎಂದು ಮನವರಿಕೆ ಮಾಡಿದರು.
ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೂ ಕಾಂಗ್ರೆಸ್ ಪಕ್ಷ ನಮ್ಮ ಸಮಾಜದ ಯಾವುದೇ ಶಾಸಕರಿಗೆ ಸಚಿವ ಸ್ಥಾನಮಾನ ನೀಡಿರುವುದಿಲ್ಲ. ಆದ್ದರಿಂದ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ನಮ್ಮ ಸಮಾಜದ ಮುಂಚೂಣಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಅಥಣಿಯ ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ನಮ್ಮ ಸಮಾಜಕ್ಕೆ ಸಚಿವ ಸ್ಥಾನ ನೀಡದಿದ್ದರೆ, ಸಮಾಜ ಮುಂಬರುವ ದಿನಗಳಲ್ಲಿ, ಸಮಾಜಕ್ಕೆ ಪೂರಕವಾಗುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುತ್ತದೆ ಎನ್ನುವ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ವಿವರಿಸಿದರು.
ಸಮಾಜದ ಮುಖಂಡರಾದ ಪ್ರಕಾಶ ಬಾಳೆಕುಂದ್ರಿ,
ಉಲ್ಲಾಸ ಬಾಳೇಕುಂದ್ರಿ, ಮಾರುತಿ ಮೂಡಲಗಿ
ಎಸ್.ಜೆ.ಏಳುಕೋಟಿ ಗಾಣಿಗ ಸಮಾಜದ ಮುಖಂಡರು ಉಪಸ್ಥಿತರಿದ್ದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

