ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಆ.31 ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ಚುನಾವಣೆ ನಡೆಸುವ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ನಡೆಸಿರುವ ರಾಜ್ಯ ಚುನಾವಣಾ ಆಯೋಗ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ, ಆಗಸ್ಟ್ ಮೂರನೇ ವಾರದಲ್ಲಿ ಮತದಾನಕ್ಕೆ ದಿನಾಂಕ ನಿಗದಿಗೊಳಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ಜುಲೈ 10ರೊಳಗೆ ಚುನಾವಣಾ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ವೇಳಾಪಟ್ಟಿ ಪ್ರಕಟವಾದ ತಕ್ಷಣವೇ ಬೆಂಗಳೂರು ನಗರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.
ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಸಲು ನೀಡಿದ್ದ ಜೂನ್ 30ರ ಗಡುವನ್ನು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಸಿಬ್ಬಂದಿ ಕೊರತೆ ಪರಿಗಣಿಸಿ ಸುಪ್ರೀಂ ಕೋರ್ಟ್ ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಮಾತ್ರವಲ್ಲ ಮತ್ತೊಮೆ ಚುನಾವಣೆ ಮುಂದೂಡುವ ವಿಚಾರವನ್ನು ನ್ಯಾಯಾಲಯದ ಮುಂದೆ ತರಬಾರದು ಎಂದು ಬಿಸಿ ಮುಟ್ಟಿಸಿತ್ತು. ರಾಜ್ಯ ಸರ್ಕಾರ ಸೆಪ್ಟೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿ ಮನವಿ ಸಲ್ಲಿಸಿದ್ದರೂ, ನ್ಯಾಯಾಲಯ ತಿರಸ್ಕರಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದ ನಂತರ ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೆ ಚುನಾವಣಾ ಸಿದ್ಧತೆ ಆರಂಭಿಸಿದೆ. ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ವ್ಯವಸ್ಥೆ, ಸಿಬ್ಬಂದಿ ನಿಯೋಜನೆ ಸೇರಿ ವಿವಿಧ ಹಂತದ ಸಿದ್ಧತೆಗಳು ನಡೆಯುತ್ತಿವೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

