ಹೆಗ್ಗೋಡು (ಸಾಗರ): ಯಂತ್ರಗಳನ್ನು ಕೈ ಬಿಡಿ ಕೈಗಳಿಗೆ ಕೆಲಸ ಕೊಡಿ ಎಂಬ ಗಾಂಧೀಜಿ ಪರಿಕಲ್ಪನೆಯಡಿಯಲ್ಲಿ ಮೂರೂವರೆ ದಶಕಗಳ ಹಿಂದೆ ಶಿವಮೊಗ್ಗ ಜಿಲ್ಲೆ ಹೆಗ್ಗೋಡು ಸಮೀಪದ ಭೀಮನಕೋಣೆಯಲ್ಲಿ ಆರಂಭಗೊಂಡ ಚರಕ ಮಹಿಳಾ ವವಿವಿಧೋದ್ದೇಶ ಕೈಗಾರಿಕಾ ಸಹಕಾರಿ ಸಂಘ ಸೆಪ್ಟೆಂಬರ್ 27,28 ರ ಎರಡು ದಿನಗ ಳಂದು ‘ಗಾಂಧಿ ಸಂತೆ’ ಎಂಬ ವಿಶಿಷ್ಟ ಮಾರಾಟ ಮೇಳವನ್ನು ಆಯೋಜಿಸಿದೆ.ಹೊನ್ನೇಸರದ ಶ್ರಮ ಜೀವಿ ಆಶ್ರಮದ ಚರಕ ಆವರಣದಲ್ಲಿ ಈ ಸಂತೆ ಆಯೋಜಿಸಲಾಗಿದೆ.
ಕೈ ಮಗ್ಗದ ನೇಕಾರಿಕೆ ಒಂದು ನಷ್ಟದಾಯಕ (ಸನ್ ಸೆಟ್) ಕೈಗಾರಿಕೆ ಅಲ್ಲ.ಇದನ್ನು ವ್ಯವಸ್ಥಿತವಾಗಿ ಮಾಡಿದಲ್ಲಿ ಕೋಟ್ಯಂತರ ರುಪಾಯಿ ಲಾಭ ಗಳಿಸಬಹುದು ಎಂಬುದನ್ನು ತಮ್ಮ ವಹಿವಾಟಿನ ಮೂಲಕ ಸಾಧಿಸಿ ತೋರಿಸಿರುವ ಚರಕ ‘ ಗಾಂಧಿ ಸಂತೆ ‘ ಮೂಲಕ ರಾಜ್ಯದ ಎಲ್ಲ ಕಡೆಗಳಲ್ಲೂ ಹರಡಿರುವ ನೇಕಾರರ ಉತ್ಪನ್ನಗಳನ್ನು ಕರಕುಶಲ ವಸ್ತುಗಳನ್ನು ಅವುಗಳ ನಿರ್ಮಾಣದ ನೈಜ ತೆಯನ್ನು ನಿರ್ಮಾಣ ಸ್ಥಳದಲ್ಲೇ ವೀಕ್ಷಿಸಿ ಅನುಭವಿಸಿ ಬಳಿಕ ಕೊಳ್ಳುವ ಪ್ರಕ್ರಿಯೆ ( ಬಿಸಿನೆಸ್) ನಡೆಸಲು ಇದು ಅನುವು ಮಾಡಿ ಕೊಡಲಿದೆ. ದೇಶದ ಅನೇಕ ಕೈ ಮಗ್ಗಗಳು ಬಾಗಿಲೆಳೆದುಕೊಂಡು ರಾಕ್ಷಸಿ ನೇಯ್ಗೆ ಯಂತ್ರಗಳಿಂದ ಬಟ್ಟೆ ನೇಯ್ಗೆ ಮತ್ತು ಮಾರಾಟದ ಈ ದಿನಮಾನದಲ್ಲಿ ಕೈ ಮಗ್ಗ ಜೊತೆಗೆ ಅದರ ಧಿರಿಸುಗಳ ಉತ್ಪನ್ನ ಹೇಗೆ ನೂರಾರು ಮಹಿಳೆಯರ ಕೈಗಳಿಗೆ ಕೆಲಸ ಕೊಡುವುದರೊಂದಿಗೆ ಅವರ ಜೀವನೋಪಾಯ ಆಗಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿರುವ ಚರಕದ ಈ ವಿಶಿಷ್ಟ ಸಂತೆ ದೇಶ ವಿದೇಶಗಳ ಖರೀದಿದಾರರನ್ನು ಶ್ರಮಜೀವಿ ಆಶ್ರಮದ ಕಡೆಗೆ ಸೆಳೆಯಲು ಈ ಸಂತೆ ನಾಂದಿ ಹಾಡಲಿದ್ದು ಭಾರಿ ಪ್ರಮಾಣದ ವಹಿವಾಟಿನ ವೇದಿಕೆಯಾಗಿ ರೂಪುಗೊಳ್ಳುವ ಆಶಯವಿದೆ. ಯಾವುದೇ ಕೃತಕ ಬಣ್ಣಗಳನ್ನು ರಾಸಾಯನಿಕಗಳನ್ನು ಬಳಕೆ ಮಾಡದೇ ನೈಸರ್ಗಿಕ ಬಣ್ಣಗಳನ್ನು ಅಡಿಕೆ ಚಿಗುರು, ದಾಳಿಂಬೆ ಸಿಪ್ಪೆ, ಮಂಜಿಷ್ಠ ಬೇರು, ತುಕ್ಕು ಹಿಡಿದ ಕಬ್ಬಿಣ ಮತ್ತು ಬೆಲ್ಲದ ಪಾಕಗಳ, ಇಂಡಿಗೋ ಎಲೆಗಳ ಬಣ್ಣಗಳನ್ನು ಇಲ್ಲೇ ಉತ್ಪಾದಿಸಿ ಬಣ್ಣಗಾರಿಕೆ ಮಾಡಿ ಬಟ್ಟೆಗಳನ್ನು ಮಾಡುವ ಚರಕ ಶ್ರಮಜೀವಿ ಆಶ್ರಮ ಗಾಂಧಿ ಸಂತೆ ಆಯೋಜನೆಗೆ ಸಜ್ಜಾಗುತ್ತಿದೆ.
ಗಾಂಧಿ ಸಂತೆ ಆಯೋಜನೆಯ ಉದ್ದೇಶ,ಹಿನ್ನೆಲೆ ಜೊತೆಗೆ ಸಂತೆ ಕಾರ್ಯಕ್ರಮಗಳ ಬಗ್ಗೆ ಶ್ರಮಜೀವಿ ಆಶ್ರಮದ ಪುಟ್ಟ ರಂಗಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಕ ಸಂಸ್ಥಾಪಕ ಮತ್ತು ಟ್ರಸ್ಟಿ ಖ್ಯಾತ ರಂಗಕರ್ಮಿಯೂ ಆಗಿರುವ ಪ್ರಸನ್ನ ಹೆಗ್ಗೋಡು ಅವರು ಖರೀದಿದಾರರು ಉತ್ಪಾದನಾ ಸ್ಥಳಕ್ಕೆ ಬಂದು ಉತ್ಪಾದನೆ ಅನುಭವ ಪಡೆದು ಖರೀದಿ ವಹಿವಾಟು ನಡೆಸಲು ಈ ಸಂತೆ ಅವಕಾಶ ಮಾಡಿಕೊಡಲಿದೆ. ಜೊತೆಗೆ ನಿಸರ್ಗ ರಮಣೀಯ ಈ ಭಾಗದ ಪರಿಸರದ ಸೊಬಗನ್ನು ಸವಿಯುವ, ಈ ಭಾಗದ ಕಲೆ, ಸಂಸ್ಕೃತಿ, ನೂರಾರು ಕುಟುಂಬಗಳ ಜೀವನೋಪಾಯಕ್ಕೆ ಚರಕ ಆಧಾರವಾಗಿರುವುದನ್ನು ಕಣ್ಣಾರೆ ಕಂಡು, ಮಲೆನಾಡಿನ ವಿಶಿಷ್ಟ ಖಾದ್ಯಗಳನ್ನು ಉಂಡು, ಶ್ರಮಜೀವಿ ಆಶ್ರಮದ ಆವರಣದಲ್ಲೇ ಇರುವ ಕುಟೀರಗಳಲ್ಲಿ ಒಂದೆರಡು ದಿನಗಳ ಕಾಲ ನೆಲೆಗೊಂಡು ವಹಿವಾಟನ್ನೂ ಒಂದು ಅನುಭವವಾಗಿಸುವ ‘ಗಾಂಧಿ ಪ್ರವಾಸ’ವೆಂಬ ವಿಶಿಷ್ಟ ಕಲ್ಪನೆಯೂ ಇದರ ಹಿಂದೆ ಅಡಗಿದೆ ಎಂದು ವಿವರಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈಮಗ್ಗದ ಬಟ್ಟೆಗಳ ಉತ್ಪನ್ನ ದಿರಿಸುಗಳನ್ನು ಧರಿಸುವುದಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಚರಕ ಸಂಘದಂತಃ ಕ್ರಿಯಾಶೀಲ ಯೋಜನೆಗಳನ್ನೂ ಬೆಂಬಲಿಸಬೇಕು ಎಂದರು . ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೆರೆನ್ಸ್ ಪೀಟರ್ ಮಾತನಾಡಿ ಸಂಘ ಹೇಗೆ ಸತತವಾಗಿ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದರು. ಒಂದೂವರೆ ಲಕ್ಷ ರುಪಾಯಿ ಆರಂಭಿಕ ಷೇರು ಬಂಡವಾಳ ಹೂಡಿ ಆರಂಭಿಸಿದ ಸಂಘ ಇಂದು ಏಳು ಜಿಲ್ಲೆಗಳ ಏಳುನೂರಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. 9.66 ಕೋಟಿ ರೂಪಾಯಿ ವಹಿವಾಟು ನಡೆಸಿ 50 ಲಕ್ಷ ರುಪಾಯಿ ನಿವ್ವಳ ಲಾಭಗಳಿಸಿದೆ. ಚರಕ ಸಂಘದ ಎಲ್ಲ ಕಾಯಂ ಮತ್ತು ಹೊರ ಗುತ್ತಿಗೆ ಕೆಲಸಗಾರರಿಗೂ ಪ್ರತಿ ವರ್ಷವೂ ಲಾಭಾಂಶ(ಬೋನಸ್) ನೀಡಲಾಗುತ್ತಿದೆ ಎಂದು ವಿವರಿಸಿದರು. ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ, ಕಾರ್ಯದರ್ಶಿ ರಮೇಶ್, ವಿನ್ಯಾಸ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ ಹಾಜರಿದ್ದರು.
ಕೈ ಮಗ್ಗದ ನೇಯ್ಗೆ ನೈಸರ್ಗಿಕ ಬಣ್ಣಗಾರಿಕೆಯ ಪ್ರತ್ಯಕ್ಷ ಅನುಭವ: ಸಾಗರದ ಹೊನ್ನೇಸರದಲ್ಲಿ ಸೆಪ್ಟೆಂಬರ್ 27,28 ಗಾಂಧಿ ಸಂತೆ

