ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತಾಲಯವು 2026ನೇ ಸಾಲಿನ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಪರಿಶೀಲಿಸಲು ಅಧಿಕಾರಿಗಳ ತಂಡವನ್ನು ನೇಮಿಸಿ ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಆಯುಕ್ತಾಲಯದ ಆದೇಶದ ಪ್ರಕಾರ, ವರ್ಗಾವಣೆಯಿಂದ ಬಾಧಿತರಾದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಆದೇಶ ಸ್ವೀಕರಿಸಿದ ಮೂವತ್ತು ದಿನಗಳೊಳಗಾಗಿ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಅವುಗಳನ್ನು ಪರಿಶೀಲಿಸಲು ವಿವಿಧ ಹುದ್ದೆಗಳ ಅಧಿಕಾರಿಗಳನ್ನು ನೇಮಿಸಲಾಗಿದೆ.
ಈ ಆದೇಶದಲ್ಲಿ ಗ್ರೂಪ್ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಹುದ್ದೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಮನ್ವಯ ಜವಾಬ್ದಾರಿಗಳಿಗಾಗಿ ನೇಮಿಸಲಾಗಿದೆ. ಡಾ. ರಘುನಂದನ್ (NCD), ಡಾ. ವೀರಭದ್ರಯ್ಯ (PHI), ಡಾ. ಸುರೇಶ್ ಶಾಸ್ತ್ರಿ (ABARK), ಡಾ. ಚಂದ್ರಿಕಾ (FW), ಡಾ. ಸಂಗೀತಾ (SIHFW), ಡಾ. ವಿವೇಕ ದೊರೆ (ವೈದ್ಯಕೀಯ-1), ಡಾ. ಪ್ರಭುದೇವ ಗೌಡ (EMRI), ಡಾ. ರಮೇಶ್ (PHI), ಡಾ. ಪದ್ಮ (SSU), ಡಾ. ರಾಧಾಕೃಷ್ಣ (DJD ಬೆಂಗಳೂರು), ಡಾ. ನಾಗಮೂರ್ತಿ (DJD) ಸೇರಿದಂತೆ ಹಲವಾರು ಉಪ ನಿರ್ದೇಶಕರು ಮತ್ತು ಕಛೇರಿ ಅಧೀಕ್ಷಕರು, ಗಣಕಯಂತ್ರ ಸಹಾಯಕರು, ಶುಶೂಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ವಾಹನ ಚಾಲಕರು, ಫಾರ್ಮಸಿ ಅಧಿಕಾರಿಗಳು ಮುಂತಾದವರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಮೇಲ್ಮನವಿಗಳನ್ನು ಪರಿಶೀಲಿಸಲು ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿದ್ದು, ಶ್ರೀನಿವಾಸ ಎಸ್.ಎಂ., ಡಾ. ಸೌಜನ್ಯ, ಗೀತಾ ಹುಡೇದ, ವೆಂಕಟರಾಜು ಮುಂತಾದವರು ತಮ್ಮ ತಮ್ಮ ವೃಂದಗಳ ಮೇಲ್ಮನವಿಗಳನ್ನು ಪರಿಶೀಲಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸುವ ಜವಾಬ್ದಾರಿ ಹೊಂದಿದ್ದಾರೆ.
ಆಯುಕ್ತರು ನೀಡಿರುವ ಸೂಚನೆಯಂತೆ, ನೇಮಿಸಲಾದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮೇಲ್ಮನವಿಗಳನ್ನು ಪರಿಶೀಲಿಸಿ, ಷರಾದೊಂದಿಗೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಈ ಮೂಲಕ ವರ್ಗಾವಣೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಗಿಯುವಂತೆ ಕ್ರಮ ಕೈಗೊಳ್ಳಲಾಗಿದೆ.

