ಬೆಂಗಳೂರು: ಬರ್ತ್ ಡೇ ಪಾರ್ಟಿ ಆಚರಣೆಗಾಗಿ ಕರೆಸಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ನೊಂದ ಯುವತಿ ನೀಡಿರುವ ದೂರಿನ ಮೇರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸೋಮಶೇಖರ್, ಅಂಬರೀಶ್, ಪ್ರದೀಪ್, ರಾಮಪ್ಪ ಹಾಗೂ ಜಗದೀಶ್ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಬೆಂಗಳೂರು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ್ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸೋಮಶೇಖರ್ ಎಂಬಾತ ಯುವತಿಗೆ ಪರಿಚಯವಿದ್ದ. ಎರಡು ದಿನಗಳ ಹಿಂದೆ ಯುವತಿಯ ಬರ್ತ್ ಡೇ ಇದ್ದಿದ್ದರಿಂದ ಪಾರ್ಟಿ ನೀಡುವುದಾಗಿ ತಲಘಟ್ಟಪುರಕ್ಕೆ ಆಕೆಯನ್ನ ಆಹ್ವಾನಿಸಿದ್ದ. ದೇವನಹಳ್ಳಿಯಲ್ಲಿ ನೆಲೆಸಿದ್ದ ಯುವತಿ ಸೋಮಶೇಖರ್‌ನ ಮಾತು ನಂಬಿ ಅಲ್ಲಿಗೆ ತೆರಳಿದ್ದಳು. “ನನ್ನ ಸ್ನೇಹಿತರು ಬಂದಿದ್ದಾರೆ, ಅವರಂದಿಗೆ ಪಾರ್ಟಿ ಮಾಡೋಣ” ಎಂದು ನಂಬಿಸಿದ್ದ ಆರೋಪಿ ಬಳಿಕ ಯುವತಿಯನ್ನು ತನ್ನ ರೂಮ್‌ಗೆ ಆಹ್ವಾನಿಸಿದ್ದ. ಅದರಂತೆ ಅಲ್ಲಿ ಪಾರ್ಟಿ ನಡೆಯುತ್ತಿದ್ದ ಸಂದರ್ಭದಲ್ಲಿ, ಯುವತಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಆರೋಪಿಗಳಲ್ಲೊಬ್ಬನಾದ ಅಂಬರೀಶ ಎಂಬಾತ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಆರೋಪಿಗಳ ಗುಂಪಿನಿಂದ ಬಚಾವಾದ ಸಂತ್ರಸ್ತ ಯುವತಿ, ತನ್ನ ಪ್ರಾಣ ರಕ್ಷಿಸಿಕೊಳ್ಳಲು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾಳೆ. ಆತಂಕದ ನಡುವೆಯೂ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ತನಗಾದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ಕರೆ ಸ್ವೀಕರಿಸಿ ಎಚ್ಚೆತ್ತ ತಲಘಟ್ಟಪುರ ಪೊಲೀಸರು, ಕೂಡಲೇ ಸ್ಥಳಕ್ಕೆ ದೌಡಾಯಿಸಿ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ.
ಸೋಮಶೇಖರ್, ಅಂಬರೀಶ ಸೇರಿದಂತೆ ಐದೂ ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

