ಉಪಯುಕ್ತ ಸುದ್ದಿ

ಶ್ರೀ ಮಂಜುನಾಥ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯ ಅರಿವು ಮೂಡಿಸುವ ಕಾರ್ಯಕ್ರಮ

Share It

ಬೆಂಗಳೂರು:ಕನ್ನಡ ಪತ್ರಿಕೋದ್ಯಮದ ಇತಿಹಾಸ ಮತ್ತು ಕನ್ನಡದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ , ಶ್ರೀ ಮಂಜುನಾಥ ಟ್ರಸ್ಟ್ ವತಿಯಿಂದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಜ ಮಯೂರವರ್ಮ ವಾರ್ಡಿನ ಶಾಲಾ ಮಕ್ಕಳಿಗಾಗಿ ವಿಶೇಷ “ಕನ್ನಡ ಪತ್ರಿಕಾ ದಿನಾಚರಣೆ” ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್‌ನ ಅಧ್ಯಕ್ಷರಾದ ಅವಿನ್ ಆರಾಧ್ಯ ಹಾಗೂ ಪದಾಧಿಕಾರಿಗಳು ಶಾಲಾ ಮಕ್ಕಳಿಗೆ ಕನ್ನಡ ದಿನಪತ್ರಿಕೆಗಳನ್ನು ತೋರಿಸುತ್ತಾ, ಅದರಲ್ಲಿನ ಸುದ್ದಿ, ಲೇಖನಗಳು ಹಾಗೂ ಪ್ರಚಲಿತ ವಿದ್ಯಮಾನಗಳನ್ನು ಹೇಗೆ ಓದಬೇಕು ಮತ್ತು ಗ್ರಹಿಸಬೇಕು ಎಂಬುದನ್ನು ಅತ್ಯಂತ ಆಸಕ್ತಿಯಿಂದ ವಿವರಿಸಿದರು.
ಪತ್ರಿಕೆ ಓದುವ ಹವ್ಯಾಸ ಇಂದಿನ ಅಗತ್ಯ:

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ದಿನಪತ್ರಿಕೆಗಳ ಮಹತ್ವ, ಸಮಾಜದಲ್ಲಿ ಪತ್ರಕರ್ತರ ಪಾತ್ರ ಮತ್ತು ಭಾಷಾ ಬೆಳವಣಿಗೆಗೆ ಪತ್ರಿಕೆಗಳು ಹೇಗೆ ಪೂರಕವಾಗಿವೆ ಎಂಬ ಬಗ್ಗೆ ಜಾಗೃತಿ ಮೂಡಿಸಿದರು.

ಅಭಿಯಾನದಲ್ಲಿ ಟ್ರಸ್ಟ್‌ನ ಬೋರೇಗೌಡ, ದೊರೆಯಾದವ್ ಮತ್ತು ಪ್ರಮುಖರು, ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಶಾಲಾ ವಿದ್ಯಾರ್ಥಿಗಳು ಕೂಡ ಅತ್ಯಂತ ಕುತೂಹಲದಿಂದ ಪತ್ರಿಕೆಯ ಪುಟಗಳನ್ನು ತಿರುವುತ್ತಾ, ಗಣ್ಯರು ನೀಡಿದ ಮಾಹಿತಿಯನ್ನು ಆಲಿಸಿದರು.

ಟ್ರಸ್ಟ್‌ನ ಈ ಉಪಯುಕ್ತ ಸಾಮಾಜಿಕ ಕಾರ್ಯಕ್ಕೆ ಪೋಷಕರ ವಲಯದಲ್ಲಿ, ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.


Share It

You cannot copy content of this page