ಬೆಂಗಳೂರು: ಇತ್ತೀಚೆಗೆ ಡಿ.ಕೆ ಶಿವಕುಮಾರ್ ಅವರು ಮಹಾಕುಂಭಮೇಳಕ್ಕೆ ಹೋಗಿ ಬಂದು ಯೋಗಿ ಆದಿತ್ಯನಾಥ್ ಅವರ ಉತ್ತರಪ್ರದೇಶದ ಸರ್ಕಾರ ಕುಂಭದ ನಿರ್ವಹಣೆಯನ್ನು ಸರಿಯಾಗಿ ನಿರ್ವಹಣೆ ಮಾಡಿದೆ ಎಂದು ಹಾಡಿ ಹೊಗಳಿದ್ದರು.
ಇದಾದ ಬಳಿಕ ನಿನ್ನೆ (ಫೆಬ್ರವರಿ 26) ಕೊಯಿಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಆಚರಣೆಯಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ ಶಿವಕುಮಾರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಪಾಲ್ಗೊಂಡಿದ್ದು ಕಾಂಗ್ರೆಸ್‌ನ ಕೆಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಕಾಂಗ್ರೆಸ್ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿ.ಪಕ್ಷ ನಾಯಕ ಆರ್. ಅಶೋಕ್ ಅವರು, ಇಶಾ ಫೌಂಡೇಶನ್‌ನಲ್ಲಿ ಡಿ.ಕೆ ಶಿವಕುಮಾರ್ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮದ ವಿಚಾರವಾಗಿ ನಮ್ಮ ಪಕ್ಷದ ನಾಯಕರು ಹೋಗೋದು ಸಾಮಾನ್ಯ. ಪ್ರಧಾನಿ ಕೂಡ ಹಿಂದೆ ಹೋಗಿದ್ದಾರೆ. ಡಿ.ಕೆ ಶಿವಕುಮಾರ್ ಯಾಕೆ ಹೋಗಿದ್ದು ಅಂತ ಆ ಪಕ್ಷದಲ್ಲಿ ಆಕ್ಷೇಪ ಶುರುವಾಗಿದೆ ಎಂದರು.
ಡಿ.ಕೆ ಶಿವಕುಮಾರ್ ಒದ್ದು ಕಿತ್ಕೊಳ್ತಿನಿ ಅಂತಿರ್ತಾರೆ. ಕುಂಭಮೇಳಕ್ಕೆ ಖರ್ಗೆ ಹೋಗೋದು ಬೇಡ ಅಂತಾರೆ. ಆದ್ರೆ ಡಿ.ಕೆ ಶಿವಕುಮಾರ್ ಹೋಗಿದ್ದಾರೆ. ಪ್ರಧಾನಿಯನ್ನು ಭೇಟಿ ಮಾಡಿ ಡಿ.ಕೆ ಶಿವಕುಮಾರ್ ಬಂದಿದ್ರು. ಇಶಾಗೂ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ರು. ಇವೆಲ್ಲವೂ ಅವರ ವೈಯಕ್ತಿಕ ಹಾಗೂ ಪಕ್ಷದ ಆಂತರಿಕ ವಿದ್ಯಮಾನ ಎಂದರು.