ರಾಜಕೀಯ ಸುದ್ದಿ

ಕರ್ನಾಟಕ-ಮಹಾರಾಷ್ಟ್ರ ಭಾಷಾ ಸಮಸ್ಯೆ ಬಗೆಹರಿಸಲು ಕೇಂದ್ರ ಮುಂದಾಗಲಿ: ರಾಷ್ಟ್ರಪತಿಗೆ ಪತ್ರ

Share It

ಬೆಂಗಳೂರು, ಫೆ.27: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ಮೇಲೆ ಬೆಳಗಾವಿ ಬಳಿ ಮರಾಠಿ ಪುಂಡರು ಹಲ್ಲೆ ಮಾಡಿದ ಬಳಿಕ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಇದು ಕನ್ನಡ-ಮರಾಠಿ ಭಾಷಾ ಗಲಾಟೆಗೂ ಕಾರಣವಾಗಿತ್ತು. ಹೀಗಾಗಿ ಕರ್ನಾಟಕ-ಮಹಾರಾಷ್ಟ್ರ ನಡುವೆ ಭಾಷೆ ಗಲಾಟೆ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಿ ಸಂವಿಧಾನದ ಅವಕಾಶಗಳಂತೆ ವಿಶೇಷಾಧಿಕಾರಿ ನೇಮಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.

ಪತ್ರದಲ್ಲೇನಿದೆ?
ಇದೀಗ ಮತ್ತೊಮ್ಮೆ ಉಲ್ಬಣಗೊಂಡಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆ ನಿಮಗೆ ಈ ಪತ್ರವನ್ನು ಬರೆಯಲಾಗುತ್ತಿದೆ. ಎರಡೂ ರಾಜ್ಯಗಳ ಸರ್ಕಾರಗಳು ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ-ರೂ, ಕಣ್ಣಿಗೆ ಕಾಣದ ಸಂಗತಿಗಳಿವೆ. ದೊಡ್ಡ ಪ್ರಮಾಣದ ಹಿಂಸಾಚಾರ, ಆಸ್ತಿಪಾಸ್ತಿ ನಷ್ಟ ಮತ್ತು ಗಡಿಯ ಎರಡೂ ಬದಿಗಳಲ್ಲಿನ ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ಆಳವಾದ ಪರಿಣಾಮ ಬೀರಿದೆ. ಹಾಗಾಗಿ ಈ ಸಂದರ್ಭದಲ್ಲಿ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಕೇಂದ್ರ ಸರ್ಕಾರದ ಪಾತ್ರವು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದಿದ್ದಾರೆ.

ರಾಷ್ಟ್ರಪತಿಗಳು ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಿಯನ್ನು ನೇಮಿಸತಕ್ಕದ್ದು. ಅದರ ಅಡಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಒದಗಿಸಲಾದ ರಕ್ಷಣೋಪಾಯಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ತನಿಖೆ ಮಾಡುವುದು ಮತ್ತು ರಾಷ್ಟ್ರಪತಿಗಳು ನಿರ್ದೇಶಿಸಬಹುದಾದಂತಹ ಮಧ್ಯಂತರಗಳಲ್ಲಿ ಆ ವಿಷಯಗಳ ಬಗ್ಗೆ ರಾಷ್ಟ್ರಪತಿಗಳಿಗೆ ವರದಿ ಮಾಡುವುದು ವಿಶೇಷ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು ಮತ್ತು ರಾಷ್ಟ್ರಪತಿಗಳು ಅಂಥ ಎಲ್ಲಾ ವರದಿಗಳನ್ನು ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಇಡುವಂತೆ ಮಾಡತಕ್ಕದ್ದು ಮತ್ತು ಸಂಬಂಧಿತ ರಾಜ್ಯಗಳ ಸರ್ಕಾರಗಳಿಗೆ ಕಳುಹಿಸಬೇಕು.

ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರಿಯನ್ನು ಕೂಡಲೇ ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ದಯಮಾಡಿ ನಿರ್ದೇಶಿಸಬೇಕೆಂದು ವಿನಂತಿಸಲಾಗಿದೆ. ಅವರು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮತ್ತು ಕೇಂದ್ರಕ್ಕೆ ವರದಿ ಸಲ್ಲಿಸುತ್ತಾರೆ. ಬಳಿಕ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಬಹುದಾಗಿದೆ. ನಂತರ ಎರಡೂ ಕಡೆಯ ಸಾಮಾನ್ಯ ಜನರು ಶಾಂತಿಯುತ ಜೀವನ ನಡೆಸಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


Share It

You cannot copy content of this page