ಬೆಂಗಳೂರು ಫೆ.27: ಬೆಂಗಳೂರಿನ ಅರಮನೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಸುಗ್ರೀವಾಜ್ಞೆಯನ್ನು ಒಪ್ಪದ ಸುಪ್ರೀಂಕೋರ್ಟ್ ಟಿಡಿಆರ್ ಅನ್ನು ತನ್ನ ಸುಪರ್ದಿಗೆ ನೀಡುವಂತೆ ಸೂಚಿಸಿದೆ.
ಹೀಗಾಗಿ 10 ದಿನಗಳ ಒಳಗಾಗಿ ಸುಪ್ರೀಂಕೋರ್ಟ್ ಗೆ ಟಿಡಿಆರ್ ಪ್ರಮಾಣಪತ್ರವನ್ನು ಸರ್ಕಾರ ನೀಡಬೇಕಾಗಿದೆ. ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗ ಬಳಕೆಗೆ ಬರೋಬ್ಬರಿ 3400 ಕೋಟಿ ರೂ. ಮೊತ್ತದ ಟಿಡಿಆರ್ ಪರಿಹಾರ ನೀಡಲು ನ್ಯಾಯಾಲಯ ಆದೇಶ ನೀಡಿತ್ತು. ಇಷ್ಟು ಮೊತ್ತದ ಪರಿಹಾರ ನೀಡಿದರೆ ರಾಜ್ಯಸರ್ಕಾರಕ್ಕೆ ಹೊರೆ ಆಗಲಿದೆ ಎಂಬ ಕಾರಣಕ್ಕೆ ಜನವರಿ 23ರಂದು ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದ ರಾಜ್ಯಸರ್ಕಾರ ರಸ್ತೆ ಅಗಲೀಕರಣ ಪ್ರಸ್ತಾಪವನ್ನೇ ಕೈಬಿಟ್ಟು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಕಳೆದ ವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ರಾಜ್ಯಸರ್ಕಾರವು ಸುಗ್ರೀವಾಜ್ಞೆ ನಿರ್ಣಯವನ್ನು ಸುಪ್ರೀಂಕೋರ್ಟ್‌ಗೆ ತಿಳಿಸಿ ರಸ್ತೆ ಅಗಲೀಕರಣ ಪ್ರಸ್ತಾವನೆ ಕೈಬಿಟ್ಟಿದ್ದೇವೆ. ಹೀಗಾಗಿ 3400 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವುದಿಲ್ಲ ಎಂದು ರಾಜ್ಯಸರ್ಕಾರ ಹೇಳಿತ್ತು. ಆದರೆ, ಇದನ್ನು ಪುರಸ್ಕರಿಸದ ಸುಪ್ರೀಂಕೋರ್ಟ್ 3400 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವಂತೆ ನ್ಯಾಯಾಲಯ ಈಗಾಗಲೇ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.
ಆದರೆ, ಟಿಡಿಆರ್ ನೀಡಿದರೂ ಅದು ಬಳಕೆಯಾದಂತೆ ನೋಡಿಕೊಂಡ ರಾಜ್ಯಸರ್ಕಾರದ ಪರ ವಕೀಲರು ರಾಜ ಮನೆತನದವರಿಗೆ ನೀಡಬೇಕಿದ್ದ ಟಿಡಿಆರ್ ನ್ಯಾಯಾಲಯಕ್ಕೆ ಹಸ್ತಾಂತರವಾಗುವಂತೆ ನೋಡಿಕೊಂಡಿದ್ದಾರೆ. ರಾಜಮನೆತನದವರಿಗೆ ನೀಡಬೇಕಿದ್ದ 3,400 ಕೋಟಿ ರೂ. ಹಣ ಟಿಡಿಆರ್ ನ್ಯಾಯಾಲಯದ ಅಧಿಕಾರದಲ್ಲಿ ಇರಲಿದೆ. ಇದರಿಂದ ಟಿಡಿಆರ್ ಬಳಕೆ ಆಗಬಹುದು ಎನ್ನುವ ಆತಂಕದಿಂದ ರಾಜ್ಯಸರ್ಕಾರ ನಿರಾಳವಾಗಿದೆ. ಇತ್ತ ಟಿಡಿಆರ್ ನೀಡಲು ಸೂಚಿಸಿದ್ದ ನ್ಯಾಯಾಲಯಕ್ಕೆ ಟಿಡಿಆರ್ ನೀಡುವ ಮೂಲಕ ನ್ಯಾಯಾಂಗ ನಿಂದನೆಯಿಂದಲೂ ರಾಜ್ಯದ ಕಾಂಗ್ರೆಸ್ ಸರ್ಕಾರ ಪಾರಾಗುವ ಮೂಲಕ ತಾತ್ಕಾಲಿಕವಾಗಿ ನಿರಾಳವಾಗಿದೆ. ಬಾಕಿ ಉಳಿದ ಇನ್ನೊಂದು ಟಿಡಿಆರ್ ಜಮೀನು ಮಾಲೀಕರಿಗೆ ನೀಡಲು ಒಪ್ಪಿಗೆ ನೀಡಿದೆ. 49 ಕೋಟಿ ರೂ. ಟಿಡಿಆರ್ ಅನ್ನು ಜಮೀನು ಮಾಲೀಕರಿಗೆ ನೀಡಲು ರಾಜ್ಯಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಟಿಡಿಆರ್ ಸಂಕಷ್ಟಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಂಡ ರಾಜ್ಯಸರ್ಕಾರ ಕೊಂಚ ನಿರಾಳವಾಗಿದೆ.