ರಾಜಕೀಯ ಸುದ್ದಿ

ರಾಜ್ಯದಲ್ಲಿ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ನಗದು,ಮದ್ಯ ಜಪ್ತಿ

Share It

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತ್ತೊಂದೆಡೆ ಮಾದರಿ‌ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಕ್ರಮ ಚಟುವಟಿಕೆ ಮೇಲೆ‌ ಹದ್ದಿನ ಕಣ್ಣಿಟ್ಟಿರುವ‌ ರಾಜ್ಯ ಚುನಾವಣಾ ಆಯೋಗ ದಾಖಲೆ ಪ್ರಮಾಣದಲ್ಲಿ ದುಡ್ಡು, ಮದ್ಯ ಜಪ್ತಿ ಮಾಡಿದೆ. ಕರ್ನಾಟಕದಾದ್ಯಂತ ಕೇವಲ 38 ದಿನಗಳಲ್ಲಿ 406.73 ಕೋಟಿ ರೂ. ಮೌಲ್ಯದ ನಗದು, ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾರ್ಚ್ 14 ರಂದು ಲೋಕಸಭಾ ಚುನಾವಣೆ ಘೋಷಣೆಯಾಗಿತ್ತು. ದೇಶದಲ್ಲಿ ಅಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಅಂದಿನಿಂದ ಇಂದಿನವರೆಗೆ, ಅಂದರೆ 38 ದಿನಗಳ ವರೆಗೆ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಚುನಾವಣಾ ಆಯೋಗ ರಾಜ್ಯದಲ್ಲಿ ಈವರೆಗೆ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಜಪ್ತಿ ಮಾಡದಷ್ಟು ಹಣ, ಹೆಂಡ, ಉಡುಗೊರೆ ಹಾಗೂ ಚಿನ್ನವನ್ನು ಜಪ್ತಿ ಮಾಡಿದೆ.

ದೇಶದಲ್ಲೇ ಅತಿ ಹೆಚ್ಚು ಮದ್ಯ ರಾಜ್ಯದಲ್ಲಿ ಜಪ್ತಿ!
ಜಪ್ತಿಯಾಗಿರುವುದರಲ್ಲಿ ನಗದು, ಮದ್ಯದ ಪಾಲು ಎಷ್ಟು ಎಂದು ನೋಡುವುದಾದರೆ, 78 ಕೋಟಿ ರೂ. ನಗದು, 177 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇಡೀ ದೇಶದಲ್ಲೇ ಅತಿಹೆಚ್ಚಿನ ಪ್ರಮಾಣದ ಮದ್ಯದ ಜಪ್ತಿ ಇದಾಗಿದೆ. ಉಳಿದಂತೆ 11.24 ಕೋಟಿ ರೂ. ಮೌಲ್ಯದ ಮಾದಕ ವಸ್ತು, 59 ಕೋಟಿ ರೂ. ಮೌಲ್ಯದ ಬೆಳ್ಳಿ, ಬಂಗಾರ ಹಾಗೂ ಡೈಮೆಂಡ್, 8.14 ಕೋಟಿ ರೂ. ಮೌಲ್ಯದ ಉಡುಗೊರೆಗಳಾದ ಮಿಕ್ಸರ್, ಫ್ಯಾನ್, ಕುಕ್ಕರ್ ಜಪ್ತಿ ಮಾಡಲಾಗಿದೆ. 72 ಕೋಟಿ ರೂ. ಮೌಲ್ಯದ ಇನ್ನಿತರ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಒಟ್ಟಿನಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಕೋಟ್ಯಂತರ ರೂಪಾಯಿ ಹಣದ ಜೊತೆ ದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮದ್ಯ ಸೀಜ್ ಆಗಿರುವುದು ಚುನಾವಣಾ ಅಧಿಕಾರಿಗಳಿಗೂ ಅಚ್ಚರಿಯ ವಿಷಯವಾಗಿದೆ.


Share It

You cannot copy content of this page