ಬೆಂಗಳೂರು: ಇಲ್ಲಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿಯ ಕೊಕಾಕೋಲಾ ಗೋದಾಮು ಬಳಿ ಮಂಗಳವಾರ ಮಧ್ಯಾಹ್ನ ಭಾರಿ ಪ್ರಮಾಣದ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿ.ಸಿ) ಸ್ಫೋಟಗೊಂಡಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಸಂಪೂರ್ಣ ಭಸ್ಮವಾಗಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 12:30 ರಿಂದ 1:00 ಗಂಟೆಯ ಅವಧಿಯಲ್ಲಿ ಈ ದುರಂತ ಸಂಭವಿಸಿದೆ. ಪವರ್ ಲೋಡ್ ಹೆಚ್ಚಾಗಿದ್ದೇ ಸ್ಫೋಟಕ್ಕೆ ಪ್ರಾಥಮಿಕ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಗೊಂಡಾಗ ಟ್ರಾನ್ಸ್‌ಫಾರ್ಮರ್ ಪಕ್ಕದಲ್ಲೇ ನಿಂತಿದ್ದ ನಾಲ್ವರಿಗೆ ಭಾರಿ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಇಂದಿರಾನಗರ ನಿವಾಸಿ ನಾರಾಯಣ (50), ಟಿಸಿ ಪಾಳ್ಯದ ಆಜೀಮ್ ಪಾಷಾ, ಥಣಿಸಂದ್ರದ ಚೇತನ್ (23) ಹಾಗೂ ಲಕ್ಷ್ಮೀ (22) ಎಂದು ಗುರುತಿಸಲಾಗಿದೆ. ಇವರಲ್ಲಿ ನಾರಾಯಣ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ವಿಕ್ರಮ್ ಆಮಟೆ ತಿಳಿಸಿದ್ದಾರೆ.
ಟ್ರಾನ್ಸ್‌ಫಾರ್ಮರ್‌ನಲ್ಲಿ ನಿನ್ನೆಯೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಿಪೇರಿ ಮಾಡಬೇಕಾಗಿತ್ತು. ಸರಿಪಡಿಸಲು ಬರುವುದಾಗಿ ಅಧಿಕಾರಿಗಳು ತಿಳಿಸಿದ್ದರು, ಆದರೆ ಅವರು ಬರುವಷ್ಟರಲ್ಲೇ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
