ಹಾಸನ: ಹಾಸನದ ಅಧಿದೇವತೆ, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನನಾಂಬ ದೇವಿ ದರ್ಶನ ಇಂದಿಗೆ (3)ರಂದು ಅಂತ್ಯವಾಗಿದೆ.
ಇಂದು ಹಾಸನಾಂಬ ದೇವಸ್ಥಾನದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ವಿಶ್ವರೂಪ ದರ್ಶನ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕ ಸ್ವರೂಪ್, ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಎಸ್ಪಿ ಮೊಹಮ್ಮದ್ ಸುಜಿತಾ ಮತ್ತು ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗುತ್ತದೆ.
ಅ.24 ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅ. 25 ರಿಂದ ನ.3 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಂಬತ್ತು ದಿನಗಳಲ್ಲಿ ದಾಖಲೆಯ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದರು. ಮತ್ತು ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ದೇವಿಯ ದರ್ಶನ ಪಡೆದರು. ದರ್ಶನದ ಕೊನೆಯ ದಿನವಾದ ಶನಿವಾರ ಹಲವು ಶಾಸಕರು, ಮಾಜಿ ಸಚಿವರುಗಳು ಹಾಗೂ ಅಧಿಕಾರಿಗಳು ದೇವಿ ದರ್ಶನ ಪಡೆದು ಪುನೀತರಾದರು.