ಸ್ಪಾ ಸೆಂಟರ್ ಹೆಸರಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಕನ್ಯಾಕುಮಾರಿ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಸಾಮಾನ್ಯ ಗ್ರಾಹಕ ಎಂದು ತಪ್ಪಾಗಿ ಅಂದಾಜಿಸಿದ ವ್ಯಕ್ತಿಯೊಂದಿಗೆ ನೇರವಾಗಿ ವ್ಯವಹಾರಕ್ಕೆ ಮುಂದಾದಾಗ, ಆತ ಪೊಲೀಸ್ ಅಧಿಕಾರಿ ಎಂಬುದು ಗೊತ್ತಾಗಿ ದಂಧೆ ಬಯಲಾಯಿತು. ಈ ಪ್ರಕರಣದಲ್ಲಿ ಐವರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
2000 ರೂಪಾಯಿಗೆ ‘ಮಸಾಜ್’ ಆಫರ್
ಸ್ಪಾ ಸೇವೆಯ ಹೆಸರಿನಲ್ಲಿ ಮಹಿಳೆಯರಿಂದ ಮಸಾಜ್ ಮಾಡಿಸುತ್ತೇವೆ ಎಂದು ಹೇಳಿ, 2000 ರೂಪಾಯಿ ಪಾವತಿಸಿದರೆ ವ್ಯವಸ್ಥೆ ಮಾಡಿಕೊಡುವುದಾಗಿ ಆರೋಪಿಗಳು ಗ್ರಾಹಕರನ್ನು ಸೆಳೆಯುತ್ತಿದ್ದರು. ಇದೇ ರೀತಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಸಾಮಾನ್ಯ ವ್ಯಕ್ತಿ ಎಂದು ಭಾವಿಸಿ ಡೀಲ್ ಮಾಡಲು ಹೋಗಿದ್ದೇ ಗ್ಯಾಂಗ್ಗೆ ಮುಳುವಾಯಿತು. ಈ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ನ ವಡಶ್ಶೇರಿ ಪ್ರದೇಶದಲ್ಲಿ ನಡೆದಿದೆ.
ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕ ಸುಳಿವು ಜನವರಿ 11ರಂದು ವಡಶ್ಶೇರಿ ಠಾಣೆಯ ಸಬ್-ಇನ್ಸ್ಪೆಕ್ಟರ್ ಕುಥಾಲಿಂಗಂ ಅವರು ಮುಪ್ತಿಯ ಓಝಿನಸ್ಸೆರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದ ಚಟುವಟಿಕೆ ಗಮನಕ್ಕೆ ಬಂದಿದೆ. ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಅರುಲ್ ಮೋಹನ್ ಎಂಬಾತ ಫೋನ್ನಲ್ಲಿ ಮಾತನಾಡುತ್ತಾ, ಸ್ಪಾದಲ್ಲಿ ಮಹಿಳೆಯರಿಂದ ಮಸಾಜ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ, ಅದಕ್ಕೆ 2000 ರೂ. ಸಾಕು ಎಂದು ಹೇಳಿರುವುದು ಪೊಲೀಸರ ಕಿವಿಗೆ ಬಿದ್ದಿದೆ.
ದಾಳಿ ನಡೆಸಿ ದಂಧೆ ಪತ್ತೆ
ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಸ್ಪಾ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ನಂತರ ಇನ್ಸ್ಪೆಕ್ಟರ್ ವೇಲಮ್ಮಾಳ್ ಅವರ ನೇತೃತ್ವದಲ್ಲಿ ನಾಗರಕೋಯಿಲ್ನ ಮತ್ತೊಂದು ಪ್ರದೇಶದಲ್ಲಿ ದಾಳಿ ನಡೆಸಲಾಗಿದ್ದು, ಸ್ಪಾ ಸೆಂಟರ್ಗಳಲ್ಲಿ ಯುವತಿಯರನ್ನು ಕೆಲಸಕ್ಕೆ ಇಟ್ಟುಕೊಂಡು, ಅವರನ್ನು ಬಲವಂತವಾಗಿ ಲೈಂಗಿಕ ಚಟುವಟಿಕೆಗೆ ತೊಡಗಿಸಿ ಹಣ ಗಳಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ಆರೋಪಿಗಳ ಬಂಧನ, ಯುವತಿಯರ ರಕ್ಷಣೆ: ದಾಳಿಯ ವೇಳೆ ಅಲ್ಲಿದ್ದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿನ್ ಬ್ರಿಟ್ಟೊ (33), ತಹಿಲ್ (20), ಲಾಡ್ಜ್ ಮ್ಯಾನೇಜರ್ ವಿಜಿಜನ್ ಮಿಥುನ್ ಬಾಬು (31), ಲಾಡ್ಜ್ ಉದ್ಯೋಗಿ ಅರುಲ್ ಮೋಹನ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಈ ಪ್ರಕರಣದ ಬೆನ್ನಲ್ಲೇ ನಗರದಲ್ಲಿನ ವಿವಿಧ ಲಾಡ್ಜ್ಗಳು ಮತ್ತು ಸ್ಪಾ ಕೇಂದ್ರಗಳ ಮೇಲೂ ಪೊಲೀಸರು ತಪಾಸಣೆ ಹಾಗೂ ದಾಳಿ ಮುಂದುವರಿಸಿದ್ದಾರೆ.

