ಬೆಂಗಳೂರು: ನಿಗಮದ ಚಾಲಕ ರೀಲ್ಸ್ ನೋಡಿಕೊಂಡು ಬಸ್ ಚಾಲನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಆದೇಶ ಮಾಡಿದ್ದು, ಅದರನ್ವಯ ಚಾಲಕನನ್ನು ಅಮಾನತು ಮಾಡಲಾಗಿದೆ.
ಮಳವಳ್ಳಿ ಯಿಂದ ಮೈಸೂರಿಗೆ ಹೋಗುತ್ತಿದ್ದ ಮಾರ್ಗ ಸಂಖ್ಯೆ 79 ರಲ್ಲಿ ಬಸ್ ಚಲಾಯಿಸುತ್ತಿದ್ದ ಮಹೇಶ್ ವಿ, ಚಾಲಕ-ಕಂ-ನಿರ್ವಾಹಕ , ಬಿಲ್ಲೆ ಸಂಖ್ಯೆ 699, ಮಳವಳ್ಳಿ ಘಟಕ, ಮಂಡ್ಯ ವಿಭಾಗ ಅವರು
ಬಸ್ ಚಾಲನೆ ಮಾಡುವಾಗ ರೀಲ್ಸ್ ವೀಕ್ಷಣೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ರಸ್ತೆಯಲ್ಲಿ ಸಂಭವಿಸುವ ಸಾಕಷ್ಟು ಅಪಘಾತಗಳು ಬೇಜವಾಬ್ದಾರಿತನ/ ನಿರ್ಲಕ್ಷ್ಯದ ಚಾಲನೆಯಿಂದ ಘಟಿಸುತ್ತವೆ. ಸಾರ್ವಜನಿಕ ಸಾರಿಗೆಯ ಬಸ್ಸಿನಲ್ಲಿ ಚಾಲಕನ ಈ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ವರ್ತನೆಗೆ ನಿಗಮವು ಅವರನ್ನು ವಿಚಾರಣಾ ಪೂರ್ವ ಅಮಾನತು ಮಾಡಿದೆ.

