ಉಪಯುಕ್ತ ಸುದ್ದಿ

ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಸರ್ಕಾರಿ ಉದ್ಯೋಗದ ಅವಕಾಶ: ಆದಾಯ ತೆರಿಗೆ ಇಲಾಖೆಯಲ್ಲಿ 46 ಹುದ್ದೆಗಳು

Share It

ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯುವ ಅಪೂರ್ವ ಅವಕಾಶ ಲಭ್ಯವಾಗಿದೆ. ಗುಜರಾತ್ ಆದಾಯ ತೆರಿಗೆ ಇಲಾಖೆ ಕ್ರೀಡಾ ಕೋಟಾದಡಿ ತೆರಿಗೆ ಸಹಾಯಕ ಮತ್ತು ಮಲ್ಟಿ–ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಪ್ರಕ್ರಿಯೆ ಮೂಲಕ ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ರಾಜ್ಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸರ್ಕಾರಿ ವಲಯದಲ್ಲಿ ಸ್ಥಿರ ಉದ್ಯೋಗವನ್ನು ಬಯಸುವ ಕ್ರೀಡಾಪಟುಗಳಿಗೆ ಇದು ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಉತ್ತಮ ಅವಕಾಶವಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜ.31ರಿಂದ ಆರಂಭಗೊಂಡಿದ್ದು, ಫೆ. 21 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು incometaxgujarat.gov.in ಎಂಬ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯ ಎಲ್ಲಾ ಸೂಚನೆಗಳನ್ನು ಗಮನದಿಂದ ಓದುವುದು ಅಗತ್ಯ.

ಈ ನೇಮಕಾತಿಯಲ್ಲಿ ತೆರಿಗೆ ಸಹಾಯಕ ಹಾಗೂ MTS ಎಂಬ ಎರಡು ಹುದ್ದೆಗಳು ಒಳಗೊಂಡಿವೆ. ತೆರಿಗೆ ಸಹಾಯಕ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಜತೆಗೆ, ಡೇಟಾ ಎಂಟ್ರಿ ಕಾರ್ಯದಲ್ಲಿ ಗಂಟೆಗೆ ಕನಿಷ್ಠ 8000 ಕೀ ಡಿಪ್ರೆಶನ್‌ಗಳ ವೇಗ ಹೊಂದಿರಬೇಕು. MTS ಹುದ್ದೆಗೆ 10ನೇ ತರಗತಿ ಶೈಕ್ಷಣಿಕ ಅರ್ಹತೆಯಾಗಿದೆ. ಎರಡೂ ಹುದ್ದೆಗಳಿಗೂ ಮಾನ್ಯ ಕ್ರೀಡಾ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.

ವಯೋಮಿತಿಯಂತೆ, ತೆರಿಗೆ ಸಹಾಯಕ ಹುದ್ದೆಗೆ 18 ರಿಂದ 27 ವರ್ಷಗಳು ಮತ್ತು MTS ಹುದ್ದೆಗೆ 18 ರಿಂದ 25 ವರ್ಷಗಳವರೆಗೆ ವಯಸ್ಸು ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನದ ವಿಷಯದಲ್ಲೂ ಹುದ್ದೆಗಳು ಆಕರ್ಷಕವಾಗಿವೆ. ತೆರಿಗೆ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,500 ರಿಂದ 81,100 ರೂ. ವರೆಗೆ ಸಂಬಳ ದೊರೆಯಲಿದೆ. MTS ಹುದ್ದೆಗೆ 18,000 ರಿಂದ 56,900 ರೂ. ವೇತನ ನಿಗದಿಪಡಿಸಲಾಗಿದೆ. ಜತೆಗೆ ವಿವಿಧ ಸರ್ಕಾರಿ ಭತ್ಯೆಗಳು ಮತ್ತು ಸೌಲಭ್ಯ ಪಡೆಯುವ ಅವಕಾಶವಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಕ್ರೀಡಾ ಸಾಧನೆ, ಸಲ್ಲಿಸಿದ ಪ್ರಮಾಣಪತ್ರಗಳ ಪರಿಶೀಲನೆ ಹಾಗೂ ದಾಖಲೆ ದೃಢೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಲಿಖಿತ ಪರೀಕ್ಷೆಗೆ ಬದಲಾಗಿ ಕ್ರೀಡಾ ಸಾಧನೆಯೇ ಪ್ರಮುಖ ಆಯ್ಕೆ ಮಾನದಂಡವಾಗಿದೆ. ಅರ್ಹ ಅಭ್ಯರ್ಥಿಗಳು ಸಮಯ ಮಿತಿಯೊಳಗೆ ಅರ್ಜಿ ಸಲ್ಲಿಸಿ, ಕ್ರೀಡಾ ಕ್ಷೇತ್ರದ ತಮ್ಮ ಸಾಧನೆಯನ್ನು ಸರ್ಕಾರಿ ಉದ್ಯೋಗವಾಗಿ ರೂಪಿಸಿಕೊಳ್ಳುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದು.


Share It

You cannot copy content of this page