ಹಾವೇರಿ: ಇವತ್ತು ರಾಜ್ಯ ಸರ್ಕಾರ ಶೂನ್ಯ ಸಾಧನೆಯ ಸಮಾವೇಶ ಮಾಡಿದ್ದಾರೆ. ಇದು ಭ್ರಷ್ಟಾಚಾರದ ಸಾಧನೆ ಸಮಾವೇಶ ಮತ್ತು ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ಸರ್ಕಾರ ಕೊಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಈ ಸಮಾವೇಶಕ್ಕೆ ಸ್ವಯಂ ಪ್ರೇರಿತವಾಗಿ ಜನರು ಬರಲು ಸಾಧ್ಯವಿಲ್ಲ ಎಂದು ಅರಿತು ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಜಮೀನನಲ್ಲಿ ಇರುವ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡಿದ್ದಾರೆ.
ನಮ್ಮ ಸರ್ಕಾರ ಇದ್ದಾಗ ನಾವು ಅಕ್ರಮ ಇದ್ದದ್ದನ್ನು ಸಕ್ರಮ ಮಾಡಿದ್ದೇವೆ. ಮತ್ತು ಅದರ ಮುಖಾಂತರ ಸಾಲ ಸಿಗುವ ವ್ಯವಸ್ಥೆ ಮಾಡಿದ್ದೇವೆ. ಈಗ ಜನರ ಆಸ್ತಿಯನ್ನು ಅವರೇ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿ ಸರ್ಕಾರ ಬರಿದಾದ ಖಜಾನೆ ತಂಬಲು ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ನೋಂದಣಾ ಶುಲ್ಕವನ್ನು ಬಡವರ ತಲೆ ಮೇಲೆ ಹೇರಿದ್ದಾರೆ. ಒಬ್ಬ ಬಡವ ಮೂರು ನಾಲ್ಕು ಲಕ್ಷ ಕಟ್ಟುವ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲಾ ಈ ವ್ಯವಸ್ಥೆ ಮಾಡಲು ಕಂದಾಯ ಇಲಾಖೆಯಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಇದು ಭ್ರಷ್ಟಾಚಾರದ ಸಾಧನೆಯ ಸಮಾವೇಶ ಮತ್ತು ಬಡವರ ತಲೆ ಮೇಲೆ ಆರ್ಥಿಕ ಭಾರದ ಹೊಡೆತವನ್ನು ಈ ಸರ್ಕಾರ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ಜಾಗದಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಯಾವುದೇ ಮನೆಗಳನ್ನು ಕಟ್ಟುವ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿಲ್ಲ. ಒಂದು ಸಾವಿರ ದಿವಸದ ವ್ಯರ್ಥ ಆಡಳಿತದ ಶೂನ್ಯ ಸಾಧನೆಯ ಈ ಸಮಾವೇಶವನ್ನು ಬಡವರು ಹಿಡಿ ಶಾಪ ಹಾಕುತ್ತಿರುವುದು ಸತ್ಯ. ಇದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

