ಬೆಂಗಳೂರು: ರಾಜ್ಯ ಸರ್ಕಾರವು ಅಗ್ನಿಶಾಮಕ ಇಲಾಖೆಯ ಹುದ್ದೆಗಳಲ್ಲಿ ಮಹತ್ವದ ಬದಲಾವಣೆಗೆ ಅನುಮೋದನೆ ನೀಡಿದ್ದು, ಇನ್ಮುಂದೆ ‘ಫೈರ್‌ಮ್ಯಾನ್’ ಎಂಬ ಪದನಾಮದ ಬದಲು ‘ಫೈರ್‌ಫೈಟರ್’ ಎಂಬ ಹೊಸ ಪದನಾಮ ಜಾರಿಯಾಗಲಿದೆ. ಮಹಿಳಾ ಅಭ್ಯರ್ಥಿಗಳಿಗೆ ಇಲಾಖೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದ ಅನ್ವಯ, ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಆರಂಭಿಸಿದೆ. ಅದರಂತೆ ಅಗ್ನಿಶಾಮಕ ಇಲಾಖೆಯ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಸಿದ್ಧತೆ ನಡೆಸಲಾಗಿದೆ.
ಆದೇಶದ ವಿವರಗಳು
ಕೇಂದ್ರ ಗೃಹ ಸಚಿವಾಲಯವು ಎಸ್‌ಎಫ್‌ಎಸಿ ಸಭೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಹುದ್ದೆಗಳ ಪದನಾಮಗಳಲ್ಲಿ ತಟಸ್ಥತೆ ತರಲು ಸೂಚಿಸಿದೆ. ಅದರಂತೆ ‘ಫೈರ್‌ಮ್ಯಾನ್’ ಎಂಬ ಪದವನ್ನು ‘ಫೈರ್‌ಫೈಟರ್’ ಎಂದು ಬದಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅದೇ ರೀತಿ ‘ಲೀಡಿಂಗ್ ಫೈರ್‌ಮ್ಯಾನ್’ ಹುದ್ದೆಯನ್ನು ‘ಲೀಡಿಂಗ್ ಫೈರ್‌ಫೈಟರ್’ ಎಂದು ಮರುನಾಮಕರಣ ಮಾಡಲಾಗಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ 1964ರಿಂದ ಕಾರ್ಯನಿರ್ವಹಿಸುತ್ತಿದ್ದು, ಅಗ್ನಿ ಅವಘಡಗಳು, ಪ್ರಕೃತಿ ವಿಕೋಪಗಳು, ನೆರೆ ಹಾವಳಿ, ಜಾನುವಾರು ರಕ್ಷಣೆ ಹಾಗೂ ಕಟ್ಟಡಗಳ ಅಗ್ನಿ ಸುರಕ್ಷತಾ ಕ್ರಮಗಳಲ್ಲಿ ಮಹತ್ವದ ಪಾತ್ರವಹಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಇಲಾಖೆಯಲ್ಲಿ ಒಟ್ಟು 7,159 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,272 ಅಧಿಕಾರಿ ಹಾಗೂ ಸಿಬ್ಬಂದಿ ಪ್ರಸ್ತುತ ಸೇವೆಯಲ್ಲಿ ತೊಡಗಿದ್ದಾರೆ. ‘ಅಗ್ನಿಶಾಮಕ’ ಹಾಗೂ ‘ಅಗ್ನಿಶಾಮಕ ಠಾಣಾಧಿಕಾರಿ’ ಹುದ್ದೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕ್ರಮಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿಯಮಗಳು, 2013ರ ಪ್ರಕಾರ ಈ ಪದನಾಮ ಬದಲಾವಣೆ ಜಾರಿಗೆ ಬರಲಿದ್ದು, ಮುಂದಿನ ಎಲ್ಲಾ ನೇಮಕಾತಿ ಅಧಿಸೂಚನೆಗಳಲ್ಲಿ ‘ಫೈರ್‌ಫೈಟರ್’ ಎಂಬ ಪದ ಬಳಸಲಾಗುತ್ತದೆ.
ಸರ್ಕಾರದ ಈ ಕ್ರಮದಿಂದ ಅಗ್ನಿಶಾಮಕ ಇಲಾಖೆಯಲ್ಲಿ ಲಿಂಗ ಸಮಾನತೆ ಹೆಚ್ಚುವುದರ ಜೊತೆಗೆ ಮಹಿಳೆಯರ ಪಾಲ್ಗೊಳ್ಳುವಿಕೆ ವೃದ್ಧಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

