ಬೆಂಗಳೂರು : ಸೃಜನಶೀಲ ಲಾಭರಹಿತ ಸಂಸ್ಥೆ ಆಗಿರುವ ‘ಗೋಯಿಂಗ್ ಟು ಸ್ಕೂಲ್’ ಸಂಸ್ಥೆಯು ಕರ್ನಾಟಕ ಸರ್ಕಾರ, ಒರಾಕಲ್, ಬ್ರಿಟಿಷ್ ಟೆಲಿಕಾಂ (ಬಿಟಿ) ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್ಸಿ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ರಮವಾದ ‘ಮ್ಯಾಚ್ ಡೇ’ಯನ್ನು ಅದ್ದೂರಿಯಾಗಿ ಆಯೋಜಿಸಿದೆ. ಬೆಂಗಳೂರಿನ ಜೆ.ಪಿ. ನಗರದ ಜಯಪ್ರಕಾಶ್ ನಾರಾಯಣ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
‘ಮ್ಯಾಚ್ ಡೇ’ ಕಾರ್ಯಕ್ರಮದಲ್ಲಿ 2,000 ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಅವರ ಶಿಕ್ಷಕರು ಹಾಗೂ ಪಾಲುದಾರ ಸಂಸ್ಥೆಗಳ 100 ಸ್ವಯಂಸೇವಕರು ಪಾಲ್ಗೊಂಡರು. ಗುಲಾಬಿ ಮತ್ತು ಹಸಿರು ಬಣ್ಣದ ಫುಟ್ಬಾಲ್ ವೇದಿಕೆಯಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮಗಳಿಂದ ಹಿಡಿದು, ಒರಾಕಲ್ ಮತ್ತು ಬಿಟಿ ಗ್ರೂಪ್ ಸ್ವಯಂಸೇವಕರು ಮುನ್ನಡೆಸಿದ ಒಂಬತ್ತು ಕೋಡಿಂಗ್ ಸವಾಲುಗಳ ಟೆಂಟ್ ಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆದುವು. ಈ ಸಂದರ್ಭದಲ್ಲಿ ಎಲ್ಲಾ ಪಾಲುದಾರರು ಯುವಜನರೊಂದಿಗೆ ಸಂವಾದ ನಡೆಸಿದರು. ಬೆಂಗಳೂರು ಎಫ್ಸಿ ಮಹಿಳಾ ತಂಡವು ಕ್ರೀಡಾ ಶಕ್ತಿಯನ್ನು ಪ್ರದರ್ಶಿಸಿತು; ಇದು ನಮ್ಮೆಲ್ಲರನ್ನು ಒಟ್ಟಾಗಿ ಆಟವಾಡಲು, ಕಲಿಯಲು ಮತ್ತು ನಗರ ಮಟ್ಟದಲ್ಲಿ ಸಮಾನತೆ ಹೊಂದಲು ಹಾಗೂ ಬದಲಾವಣೆಗಾಗಿ ಸಿದ್ಧರಾಗಲು ಪ್ರೇರೇಪಿಸಿತು.
ಈ ಕಾರ್ಯಕ್ರಮವು ಹೆಣ್ಣುಮಕ್ಕಳು, ಅವರಿಗೆ ಬೆಂಬಲವಾಗಿ ನಿಲ್ಲುವ ಗಂಡುಮಕ್ಕಳು, ಜೀವನ ಕೌಶಲ್ಯಗಳು, ಡಿಜಿಟಲ್ ಕೌಶಲ್ಯಗಳು, ಶಿಕ್ಷಣ, ಕ್ರೀಡೆ, ನಗರದ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ಸಮಾಗಮವಾಗಿರುವ ಅಪೂರ್ವ ಕಾರ್ಯಕ್ರಮವಾಗಿ ಮೂಡಿಬಂದಿತು.
‘ಗೋಯಿಂಗ್ ಟು ಸ್ಕೂಲ್’ ಸಂಸ್ಥೆಯು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ತಿಳಿವಳಿಕಾ ಒಪ್ಪಂದದ ಭಾಗವಾಗಿ ಕರ್ನಾಟಕದ ಸರ್ಕಾರಿ ಶಾಲೆಗಳ 5 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ಭವಿಷ್ಯಕ್ಕೆ ಒದಗುವ ಕ್ರಿಯಾತ್ಮಕ ಕೌಶಲ್ಯಗಳನ್ನು ಕಲಿಸುತ್ತಿದೆ.
ವಿನ್ಯಾಸ ಆಧಾರಿತ ಕಥೆಗಳು, ಆಟಗಳು, ಫುಟ್ ಬಾಲ್ ಮತ್ತು ತಂತ್ರಜ್ಞಾನದ ಮೂಲಕ ಯುವಪೀಳಿಗೆ ಹೊಸ ‘ಗ್ರೀನ್ ಜಾಬ್ಸ್’ (ಪರಿಸರ ಪೂರಕ ಉದ್ಯೋಗಗಳು) ಪಡೆಯಲು ಹಾಗೂ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವ ಸುಸ್ಥಿರ ಸ್ಟಾರ್ಟ್ ಅಪ್ಗಳನ್ನು ರೂಪಿಸಲು ಅಗತ್ಯವಿರುವ ಕೌಶಲ್ಯಗಳನ್ನು ಇಲ್ಲಿ ಕಲಿಯಲಿದ್ದಾರೆ.
ಬೆಂಗಳೂರಿನ ಜೆ.ಪಿ. ನಗರದ ಜಯಪ್ರಕಾಶ್ ನಾರಾಯಣ್ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 18 ಸರ್ಕಾರಿ ಶಾಲೆಗಳ 2,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಹೆಣ್ಣುಮಕ್ಕಳನ್ನೇ ಕೇಂದ್ರಬಿಂದುವಾಗಿಸಿಕೊಂಡ ಈ ಕಾರ್ಯಕ್ರಮವು ಕ್ರೀಡೆ ಮತ್ತು ತಂತ್ರಜ್ಞಾನದ ಅಪೂರ್ವ ಮಿಶ್ರಣಕ್ಕೆ ಸಾಕ್ಷಿಯಾಯಿತು. ಒರಾಕಲ್, ಬಿಟಿ, ಬೆಂಗಳೂರು ಎಫ್ಸಿ ಮತ್ತು ಕರ್ನಾಟಕ ಸರ್ಕಾರದ ಪ್ರಮುಖ ಪ್ರತಿನಿಧಿಗಳು ವೇದಿಕೆಯ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಸಂವಾದದ ಮೂಲಕ ಉತ್ತರಿಸಿದರು.
ಮಕ್ಕಳ 36 ತಂಡಗಳು, ಆ ತಂಡಗಳೊಂದಿಗೆ ಇದ್ದ ಸ್ವಯಂಸೇವಕರೊಂದಿಗೆ ಡಿಜೆ, ಇಬ್ಬರು ನಿರೂಪಕರು ಮತ್ತು ಆಯಾ ಸುತ್ತಿನಲ್ಲಿ ಯಾವ ತಂಡ ಗೆದ್ದಿದೆ ಎಂದು ತೋರಿಸುವ ಎರಡು ಬೃಹತ್ ಲೀಡರ್ ಬೋರ್ಡ್ಗಳ ಸಮ್ಮುಖದಲ್ಲಿ ತಾಂತ್ರಿಕ ಮತ್ತು ಫುಟ್ ಬಾಲ್ ಸವಾಲುಗಳಲ್ಲಿ ಪಾಲ್ಗೊಂಡವು.
ಆರಂಭಿಕ ಪ್ರಶ್ನೋತ್ತರ ಅವಧಿಯ ನಂತರ, “ಗೇಮ್ ಆನ್: ಹವಾಮಾನ ಬದಲಾವಣೆ ಆಟಗಳು” ಪ್ರಾರಂಭವಾದವು. ಯುವಜನರು ಬಿಎಫ್ಸಿ ತರಬೇತುದಾರರು ನಡೆಸಿಕೊಟ್ಟ ಮಿನಿ ಫುಟ್ ಬಾಲ್ ಪಂದ್ಯಗಳು ಹಾಗೂ ಒರಾಕಲ್ ಮತ್ತು ಬಿಟಿ ಸ್ವಯಂಸೇವಕರು ನಡೆಸಿಕೊಟ್ಟ ಕೋಡಿಂಗ್ ಸವಾಲುಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ಕೋಡಿಂಗ್ ಕೇಂದ್ರಗಳಲ್ಲಿ ಮಕ್ಕಳು ಕೃತಕ ಬುದ್ಧಿಮತ್ತೆಯನ್ನು ಬಳಸಿ ಕ್ಯಾಲ್ಕುಲೇಟರ್ ಗಳನ್ನು ತಯಾರಿಸುವುದು ಮತ್ತು ಹವಾಮಾನ ಹಾಗೂ ಸ್ಮಾರ್ಟ್ ಸಿಟಿ ಪರಿಹಾರಗಳಿಗಾಗಿ ರಸಪ್ರಶ್ನೆಗಳನ್ನು ವಿನ್ಯಾಸಗೊಳಿಸುವುದನ್ನು ಪ್ರಾಯೋಗಿಕವಾಗಿ ಕಲಿತರು.
ಈ ಕುರಿತು ಮಾತನಾಡಿದ ಬಿಟಿ ಗ್ರೂಪ್ ಇಂಡಿಯಾದ ಸಾಮಾಜಿಕ ಪ್ರಭಾವ ವಿಭಾಗದ ಮುಖ್ಯಸ್ಥರಾದ ಇಯಾನ್ ಮೆಕ್ ಬ್ರೈಡ್ ಅವರು, “ಗೋಯಿಂಗ್ ಟು ಸ್ಕೂಲ್ ಸಂಸ್ಥೆಯೊಂದಿಗೆ ಬಿಟಿ ಹೊಂದಿರುವ ದೀರ್ಘಕಾಲದ ಪಾಲುದಾರಿಕೆಯು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಮ್ಮ ಸ್ವಯಂಸೇವಕರು ನಿಯಮಿತವಾಗಿ ‘ಹೆಣ್ಣುಮಕ್ಕಳಿಗಾಗಿ ಹೊರಾಂಗಣ ಶಾಲೆ’ ಕಾರ್ಯಕ್ರಮಕ್ಕೆ ತಮ್ಮ ಕೌಶಲ್ಯಗಳನ್ನು ಧಾರೆ ಎರೆಯುತ್ತಿರುವುದು ನಮಗೆ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.
ಗೋಯಿಂಗ್ ಟು ಸ್ಕೂಲ್ ಸಂಸ್ಥೆಯ ಸಿಇಓ ಲಿಸಾ ಹೈಡ್ಲಾಫ್ ಈ ಕುರಿತು ಮಾತನಾಡಿ, “ಮ್ಯಾಚ್ ಡೇ ಯಾವಾಗಲೂ ಅದ್ಭುತ ದಿನ. ನಾವೆಲ್ಲರೂ ಹೊರಗಡೆ, ಆಫ್ ಲೈನ್ ನಲ್ಲಿ ಒಟ್ಟಾಗಿ ಸೇರಲು, ನಮ್ಮ ಮತ್ತು ಯುವಜನರ ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ಮಾತನಾಡಲು, ಆಟವಾಡಲು, ಕಲಿಯಲು, ಮನಸಾರೆ ನಗಲು ಮತ್ತು ನಗುಮೊಗದಿಂದ ಇರುವ ಒಂದು ಸೊಗಸಾದ ಅವಕಾಶವಿದು. ಜೀವನ ಕೌಶಲ್ಯ, ಡಿಜಿಟಲ್ ಕೌಶಲ್ಯ, ಫುಟ್ಬಾಲ್, ತಂತ್ರಜ್ಞಾನ, ಎಐ, ಹವಾಮಾನ ಬದಲಾವಣೆ, ಶಿಕ್ಷಣ – ಇವೆಲ್ಲವೂ ಒಟ್ಟಾಗಿ ಬಂದಾಗ ನಾವು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಕಂಡುಕೊಳ್ಳಲು ಮ್ಯಾಚ್ ಡೇ ನಮಗೆ ದಾರಿ ಮಾಡಿಕೊಡುತ್ತದೆ. ಹೆಣ್ಣುಮಕ್ಕಳು ಶಾಲಾ ಶಿಕ್ಷಣ ಮುಗಿಸಿ, ನಗರವನ್ನೇ ಬದಲಿಸಬಲ್ಲ ಉದ್ಯಮಿಗಳಾಗುವಂತೆ ಪ್ರೇರೇಪಿಸುವುದು ನಮ್ಮ ಗುರಿಯಾಗಿದೆ. ಕರ್ನಾಟಕ ಸರ್ಕಾರ, ಒರಾಕಲ್, ಬಿಟಿ ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್ಸಿ ಜೊತೆ ಕೈಜೋಡಿಸಿರುವುದು ನಮಗೆ ತುಂಬಾ ಸಂತೋಷ ತಂದಿದೆ. ನಿಮ್ಮ ಅಚಲ ಬೆಂಬಲವಿಲ್ಲದೆ ಇದನ್ನು ಮಾಡಲು ಸಾಧ್ಯವಿರಲಿಲ್ಲ, ಈ ದಿನ ನಮ್ಮೊಂದಿಗೆ ಆಟವಾಡಲು ಬಂದಿದ್ದಕ್ಕಾಗಿ ಧನ್ಯವಾದಗಳು” ಎಂದು ಹೇಳಿದರು.

