ಅಪರಾಧ ಸುದ್ದಿ

ಉಡುಪಿ ಅಬಕಾರಿ ಡಿಸಿ ಮನೆ ಸೇರಿ ಅನೇಕ ಕಡೆ ಲೋಕಾಯುಕ್ತ ದಾಳಿ: ಕೋಟ್ಯಂತರ ರು. ಮೌಲ್ಯದ ಆಸ್ತಿ, ದಾಖಲೆ ಪತ್ರಗಳು ವಶ

Share It

ಉಡುಪಿ: ರಾಜ್ಯದ ವಿವಿಧೆಡೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮಹತ್ವದ ಶೋಧ ನಡೆಸಲಾಗಿದ್ದು, ಸುಮಾರು ರೂ.8 ಕೋಟಿ 69 ಲಕ್ಷ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪ್ರಕಟಣೆ ಪ್ರಕಾರ, ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಮಾರ್ಚ್ 11ರಿಂದ ಮಾರ್ಚ್ 12ರವರೆಗೆ ಎರಡು ದಿನಗಳ ಕಾಲ ಈ ಶೋಧ ಕಾರ್ಯಾಚರಣೆ ನಡೆದಿತ್ತು. ಅಧಿಕಾರಿಗೆ ಸಂಬಂಧಿಸಿದ ಒಟ್ಟು 15 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಅಧಿಕಾರಿಗಳಿಗೆ 11 ನಿವೇಶನ, 6 ವಾಸದ ಮನೆ ಹಾಗೂ 31 ಎಕರೆ ಕೃಷಿ ಜಮೀನು ಸೇರಿ ಒಟ್ಟು ರೂ.6,90,64,716 ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಜತೆಗೆ ವಿವಿಧ ರೂಪದಲ್ಲಿ ಭಾರಿ ಪ್ರಮಾಣದ ಚರಾಸ್ತಿ ಪತ್ತೆಯಾಗಿದೆ. ರೂ. 3,95,941 ನಗದು, ರೂ. 1,47,50,506 ಮೌಲ್ಯದ ಚಿನ್ನಾಭರಣ, ರೂ. 17,00,000 ಮೌಲ್ಯದ ವಾಹನಗಳು, ರೂ. 25,75,000 ಮೌಲ್ಯದ ಬ್ಯಾಂಕ್ ಠೇವಣಿ, ರೂ. 72,68,554 ಮೌಲ್ಯದ ಇತರ ವಸ್ತುಗಳು ಸೇರಿ ರೂ.2,66,90,001 ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿಸಿ ಒಟ್ಟು ರೂ.8,69,54,717 ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಈ ಆಸ್ತಿಗಳ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


Share It

You cannot copy content of this page