ರಾಜಕೀಯ ಸುದ್ದಿ

ದಾವಣಗೆರೆ ಉಪಚುನಾವಣೆ ಬಂಡಾಯ ಅಭ್ಯರ್ಥಿಗಳು ನಮ್ಮವರೇ, ಅವರೊಂದಿಗೆ ಚರ್ಚಿಸಿ ಸರಿ ಮಾಡಲಾಗುವುದು: ಡಿಸಿಎಂ ಡಿ.ಕೆ. ಶಿವಕುಮಾರ್

Share It

ದೆಹಲಿ:“ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿರುವವರು ನಮ್ಮವರೇ, ಅವರೊಂದಿಗೆ ಮಾತನಾಡಿ ಸರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ದೆಹಲಿಯ ವಿಮಾನ ನಿಲ್ದಾಣ ಹಾಗೂ ಕರ್ನಾಟಕ ಭವನದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿ “ಮಾಧ್ಯಮ ಸಂಸ್ಥೆಯೊಂದರ ಸಮ್ಮೇಳನಕ್ಕಾಗಿ ದೆಹಲಿಗೆ ಆಗಮಿಸಿದ್ದೇನೆ. ಭಾರತ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬ ವಿಷಯದ ಮೇಲಿನ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದೆಹಲಿಗೆ ಬಂದಿರುವೆ. ನಿನ್ನೆ ನಾನು ಹಾಗೂ ಸಿದ್ದರಾಮಯ್ಯನವರು ದಾವಣಗೆರೆ ಹಾಗೂ ಬಾಗಲಕೋಟೆ ಪ್ರವಾಸ ಮಾಡಿ ಬಂದಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರು ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಸಮಾಧಾನಗಳು ಹೆಚ್ಚಾಗಿವೆಯಲ್ಲ ಎಂದಾಗ, “ಎಲ್ಲರಿಗೂ ಆಸೆ ಇರುತ್ತದೆ. ಅದರಲ್ಲಿ ತಪ್ಪೇನು ಇಲ್ಲ” ಎಂದು ತಿಳಿಸಿದರು.

ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ.. ಎಲ್ಲಾ ಪಕ್ಷದಲ್ಲೂ ಇದ್ದೇ ಇದೆ. ದಾವಣಗೆರೆಯಲ್ಲಿ ಮೊದಲಿನಿಂದಲೂ ಮೂರು ಜನ ರಾಜಕಾರಣದಲ್ಲಿದ್ದರು. ನಾವೇ ಬಲವಂತ ಮಾಡಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿದೆವು. ಅವರು ಕೇಳದಿದ್ದರೂ ನಾವೇ ಅವರಿಗೆ ಒತ್ತಡ ಹಾಕಿ ಚುನಾವಣೆಗೆ ನಿಲ್ಲುವಂತೆ ಮಾಡಿದ್ದೇವೆ. ಕಳೆದ ಐದಾರು ಬಾರಿಯಿಂದ ನಾವು ಅಲ್ಲಿ ಸೋಲುತ್ತಲೇ ಬಂದಿದ್ದೆವು. ಹೀಗಾಗಿ ನಾವು ಗೆಲ್ಲಬೇಕು ಎಂದು ಅವರನ್ನು ನಿಲ್ಲಿಸಿದೆವು. ಈಗ ಅವರು ಗೆದ್ದು ಸಂಸತ್ತಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ” ಎಂದರು.


Share It

You cannot copy content of this page