ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ: ಸಿಎಂ ಸಿದ್ದರಾಮಯ್ಯ ವಿಶ್ವಾಸ
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿಘೋಷಿಸಿದ್ದಾರೆ. ಹೀಗಾಗಿ ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದರು. ಅವರು ಇಂದು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನೆಡೆಸಿ ಮಾತನಾಡಿದರು.
ಸಾದಿಕ್ ಪೈಲ್ವಾನ್ ಅವರು ನನಗೆ ಬಹಳ ವರ್ಷಗಳಿಂದ ಪರಿಚಯದವರಾಗಿದ್ದಾರೆ. ಮೈಸೂರಿನ ಕುಸ್ತಿ ಅಖಾಡಗಳಲ್ಲಿ ಅವರು ಪಾಲ್ಗೊಂಡಾಗ ಭೇಟಿಯಾಗುತ್ತಿದ್ದೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ಅಭ್ಯರ್ಥಿಯಾಗಬೇಕೆಂದು ಬಯಸುವುದು ತಪ್ಪೇನಿಲ್ಲ ಎಂದರು. ನಿನ್ನೆ 11 ಜನ ನಾಮಪತ್ರ ಹಿಂಪಡೆದಿದ್ದಾರೆ. ಪಕ್ಷದ ಕೋರಿಕೆ ಮೇರೆಗೆ ಸಾದಿಕ್ ಅವರು ಕಣದಿಂದ ಹಿಂದೆ ಸರಿದಿರುವುದರಿಂದ ಅವರಿಗೆ ಮುಖ್ಯಮಂತ್ರಿಗಳು ಧನ್ಯವಾದ ಹೇಳಿದರು.
ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರು ದಾವಣಗೆರೆಗೆ ಭೇಟಿ ನೀಡಿದ್ದರು. ಅವರು ತಲುಪುವುದು ತಡವಾದ್ದರಿಂದ ನಾಮ ಪತ್ರ ಸಲ್ಲಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ವಿಧಾನಪರಿಷತ್ ನಲ್ಲಿ ಉತ್ತರ ನೀಡಬೇಕಿದ್ದರಿಂದ ನಾನು ಖುದ್ದು ಭೇಟಿ ನೀಡಲಾಗಿಲ್ಲ ಎಂದರು.
ಪಕ್ಷದ ಕಟ್ಟಾಳು; ನಿಷ್ಠಾವಂತ ಕಾರ್ಯಕರ್ತರು: ಸಾದಿಕ್ ಪೈಲ್ವಾನ್ ಅವರು ಕಾಂಗ್ರೆಸ್ ನಲ್ಲಿ ಸುಮಾರು 40 ವರ್ಷಗಳಿಂದ ಇದ್ದು, ಪಕ್ಷದ ಕಟ್ಟಾಳು, . ದಾವಣಗೆರೆಯಲ್ಲಿ 70 ಸಾವಿರ ಮುಸ್ಲಿಂ ಮತದಾರರಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಇದನ್ನು ಪರಿಶೀಲಿಸಿ, ಮೃತರಾದವರ ಕುಟುಂಬದವರಿಗೆ ಟಿಕೆಟ್ ನೀಡುವ ಪದ್ಧತಿಯಂತೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.

