ಅಪರಾಧ ಸುದ್ದಿ

ಆನೇಕಲ್: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ, ಇಬ್ಬರು ಸಾವು

Share It

ಆನೇಕಲ್ : ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಮಲ್ಲೇನಹಳ್ಳಿ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ, ಇಬ್ಬರು ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿರುವ ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇಲ್ನೋಟಕ್ಕೆ, ವ್ಯಕ್ತಿಯು ತನ್ನ ತಾಯಿ, ಅಕ್ಕ ಹಾಗೂ ಅಕ್ಕನ ಮಗನ ಕತ್ತು ಸೀಳಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ತಾಯಿ ಆಶಾ (55) ಹಾಗೂ ಅವರ ಮಗಳು ವರ್ಷಿತಾ (34) ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಕೃತ್ಯ ಎಸಗಿದ ಮೋಹನ್ ಗೌಡ (32) ಮತ್ತು ಅಕ್ಕನ 11 ವರ್ಷ ವಯಸ್ಸಿನ ಮಗನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇವರಿಬ್ಬರೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

”ಮೋಹನ್ ಗೌಡ ಕುಟುಂಬಸ್ಥರು ಸಾಲಗಾರರ ಕಾಟದಿಂದ ತೀವ್ರ ಬೇಸತ್ತಿದ್ದರು. ಘಟನೆಗೂ ಮುನ್ನ, ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ್ದರು. ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಅದನ್ನು ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದರು. ಬಳಿಕ ತಾಯಿ ಆಶಾ, ಅಕ್ಕ ವರ್ಷಿತಾ, ಅಕ್ಕನ ಮಗ ಮಯಾಂಕ್ ಕತ್ತು ಸೀಳಿದ್ದ ಮೋಹನ್, ಬಳಿಕ ತಾನು ಕತ್ತು ಸೀಳಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.

ವಿಡಿಯೋ ನೋಡಿ ಆತಂಕಗೊಂಡ ಸಂಬಂಧಿಕರು ಮನೆ ಬಳಿ ಬಂದಿದ್ದಾರೆ. ಈ ವೇಳೆ ಬಾಗಿಲು ಲಾಕ್ ಆಗಿರುವುದು ಕಂಡುಬಂದಿದ್ದು, ಹಿಂಬಾಗಿಲನ್ನು ಒಡೆದು ಒಳ ಹೋಗಿ ನೋಡಿದಾಗ ಎರಡು ಮೃತದೇಹಗಳು ಪತ್ತೆಯಾಗಿವೆ. ಜೊತೆಗೆ, ಮೋಹನ್ ಮತ್ತು ಮಯಾಂಕ್ ನೆಲದ ಮೇಲೆ ಒದ್ದಾಡುತ್ತಿರುವುದನ್ನು ಕಂಡ ಕೂಡಲೇ, ಸಂಬಂಧಿಕರು ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ ಇಬ್ಬರಿಗೂ ಸದ್ಯ ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್​​ಪಿ ಚಂದ್ರಕಾಂತ್ ಎಂ. ವಿ. ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Share It

You cannot copy content of this page