ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ಪೋಕ್ಸೊ ನ್ಯಾಯಾಲಯ ಶನಿವಾರ ತೀರ್ಪು ಹೊರಡಿಸಿದೆ.
ಹುಕ್ಕೇರಿ ತಾಲೂಕು ಹುಲ್ಲೋಳಹಟ್ಟಿಯ ಸತ್ಯಪ್ಪ/ಸಚಿನ್ ದುಂಡಪ್ಪ ಶಿಂಗಾಯಿ (26) ಶಿಕ್ಷೆಗೊಳಗಾದ ಆರೋಪಿ. ಬಾಲಕಿಯ ತಾಯಿ ಮದುವೆ ಕಾರ್ಯಕ್ರಮಕ್ಕೆ ಭಾಂಡೆಗಳನ್ನು ತೊಳೆಯಲು ಹಾಗೂ ಅಡುಗೆ ಕೆಲಸ ಮಾಡಿ ಉಪಜೀವನ ಸಾಗಿಸುತ್ತಿದ್ದರು. ಆರೋಪಿತನು ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಗೊತ್ತಿದರೂ 01-02-06-2022 ರಂದು ಬಾಲಕಿ ಇದ್ದಲ್ಲಿಗೆ ಬಂದು ಚಪಾತಿ ಮಾಡಲಿಕ್ಕೆ ಬರುತ್ತಿ ಏನು ಅಂತಾ ಕೇಳಿದ.
ಅವಳ ಬರುವುದಿಲ್ಲ ಅಂದಳು. ನಂತರ ಅವಳನ್ನು ತನ್ನ ಮೋಟಾರು ಸೈಕಲಿನ ಮೇಲೆ ಕೂಡ್ರಿಸಿಕೊಂಡು ಅಲ್ಲಿ ಗ್ರಾಮದ ಗುಡ್ಡದಲ್ಲಿರುವ ಒಂದು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವಳ ಇಲ್ಲೇಕೆ ಕರೆದುಕೊಂಡು ಬಂದಿರುವಿ ಅಂತ ಕೇಳಿದಾಗ ಇಲ್ಲಿಯೇ ಚಪಾತಿ ಮಾಡುವುದು ಇದೆ ಎಂದು ಹೇಳಿ ಅವನು ಅವಳಿಗೆ ಮನೆಯ ಒಳಗೆ ಕರೆದುಕೊಂಡು ಹೋಗಿ, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ತಿಳಿಸಿ ಒತ್ತಾಯದಿಂದ ನಿರಂತರವಾಗಿ ಲೈಂಗಿಕ ಅತ್ಯಾಚಾರ ಮಾಡುತ್ತಾ ಬಂದಿರುತ್ತಾನೆ.
ನಂತರ ಒಂದು ದಿನ ಆರೋಪಿತನು ಅವಳ ತಾಯಿಗೆ ಪೋನ್ ಮಾಡಿ ಬಾಲಕಿಯ ಕೈಯಲ್ಲಿ ಕೊಟ್ಟು ಈ ರೀತಿಯಾಗಿ ಹೇಳಲು ತಿಳಿಸಿದ್ದಾನೆ. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಇನ್ನೊಂದು ತಾಸು ಕೆಲಸ ಆಗುತ್ತದೆ. ಕೆಲಸ ಮುಗಿಸಿ ವಾಪಸ್ ಮನೆಗೆ ಬರುತ್ತೇನೆ ಎಂದು ಹೇಳಿಸಿದ ಅಪರಾಧಕ್ಕೆ ದಾಖಲಾಧಿಕಾರಿ ಎಸ್.ಪಿ. ಉನ್ನದ ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖಾಧಿಕಾರಿ ಮನೋಜ ಕುಮಾರ ನಾಯಕ ಅವರು ಪ್ರಕರಣದ ಮುಂದಿನ ತನಿಖೆ ಮಾಡಿ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಮಾನ್ಯ ನ್ಯಾಯಾಧೀಶರಾದ ಸಿ. ಎಂ.ಪುಷ್ಪಲತಾ ಅವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 6 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 59 ದಾಖಲೆಗಳು, 13 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದರು.
ಆರೋಪಿತನಿಗೆ ಕಲಂ 6 ರ ಪ್ರಕಾರ 20 ವರ್ಷಗಳ ಕಾರಾಗೃಹ ಶಿಕ್ಷೆ ದಂಡ ರೂ ಒಂದು ಲಕ್ಷ ಮತ್ತು ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 2 ವರ್ಷಗಳ ಕಾರಾಗೃಹ ಶಿಕ್ಷೆ & sc/st pa act ಕಲಂ 3(2) (v) ರ ಪ್ರಕಾರ 10 ವರ್ಷ ಕಾರಾಗೃಹ ಶಿಕ್ಷೆ ದಂಡ 50,000/- ಮತ್ತು ದಂಡದ ಮೊತ್ತ ತುಂಬಲು ತಪ್ಪಿದಲ್ಲಿ 1 ವರ್ಷ ಶಿಕ್ಷೆಯನ್ನು ನ್ಯಾಯಾಲಯ ತೀರ್ಪು ನೀಡಿದೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷಗಳ ಪರಿಹಾರ ಪಡೆಯಲು ಆದೇಶಿಸಿದೆ. ಪರಿಹಾರ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಠೇವಣಿ ಇಡಲು ಆದೇಶ ಮಾಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್.ವಿ.ಪಾಟೀಲ ಪ್ರಕರಣ ಮಂಡಿಸಿದ್ದರು.

