ಬೆಂಗಳೂರು: ಆರು ವರ್ಷದ ಬಾಲಕಿಯ ಕುತ್ತಿಗೆ ಬಿಗಿದು ಹತ್ಯೆಗೈದ ದುಷ್ಕರ್ಮಿಗಳು ಮೃತದೇಹವನ್ನು ನೀಲಗಿರಿ ತೋಪಿನಲ್ಲಿ ಬಿಸಾಡಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸೋಂ ಮೂಲದ ದಂಪತಿಯ ಪುತ್ರಿ ಕೊಲೆಯಾದವಳು. ವಿಠಸಂದ್ರದ ನೀಲಗಿರಿ ತೋಪಿನಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಪರಿಚಯಸ್ಥರೇ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಸ್ಸೋಂ ಮೂಲದ ವ್ಯಕ್ತಿಯು ಒಂದು ವರ್ಷದ ಹಿಂದೆ ಪತ್ನಿ ಮತ್ತು ಪುತ್ರಿ ಜತೆ ಬೆಂಗಳೂರಿಗೆ ಬಂದಿದ್ದು, ವಿಠಸಂದ್ರದ ಅಪಾರ್ಟ್ಮೆಂಟ್ವೊಂದರಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದು, ಸಮೀಪದ ಗೋಡೌನ್ವೊಂದರಲ್ಲಿ ವಾಸವಾಗಿದ್ದಾರೆ.
ಗುರುವಾರ ಸಂಜೆ ಬಾಲಕಿ ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದ್ರೆ ಅವರ ಮಗಳು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಬಳಿಕ ಶುಕ್ರವಾರ ಮಧ್ಯಾಹ್ನ ಬಾಲಕಿಯ ತಂದೆ ಪೊಲೀಸ್ ಠಾಣೆಗೆ ಬಂದು ಪುತ್ರಿ ನಾಪತ್ತೆ ಬಗ್ಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಮಧ್ಯೆ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಸಾರ್ವಜನಿಕರೊಬ್ಬರ ಮಾಹಿತಿ ಮೇರೆಗೆ ವಿಠಸಂದ್ರದ ನೀಲಗಿರಿ ತೋಪಿನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದುಷ್ಕರ್ಮಿಗಳು ಬಾಲಕಿಯನ್ನು ಅಪಹರಿಸಿ, ಕುತ್ತಿಗೆ ಬಿಗಿದು ಕೊಲೆಗೈದು ಶವವನ್ನು ನೀಲಗಿರಿ ತೋಪಿನಲ್ಲಿ ಬಿಸಾಕಿ ಹೋಗಿದ್ದಾರೆ ಎಂಬುದು ಗೊತ್ತಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೋ ದ್ವೇಷದಿಂದ ಪರಿಚಯಸ್ಥರೇ ಕೊಲೆಗೈದಿರಬಹುದು ಎಂಬ ಅನುಮಾನವಿದ್ದು, ತನಿಖೆ ನಡೆಯುತ್ತಿದೆ. ವೈದ್ಯಕೀಯ ಪರೀಕ್ಷೆ ಪ್ರಕಾರ, ಬಾಲಕಿ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಆಗಿಲ್ಲ ಎಂಬುದು ಪತ್ತೆಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

