ಚೆನ್ನೂರು(ಆಂಧ್ರ ಪ್ರದೇಶ): ತಂದೆಯೊಬ್ಬ ತನ್ನ ಎರಡು ತಿಂಗಳ ಶಿಶುವನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಆಂಧ್ರದ ವೈಎಸ್ಆರ್ ಕಡಪ ಜಿಲ್ಲೆಯ ಚೆನ್ನೂರಿನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೈದುಕೂರಿನ ದಂಡು ಬಾಲನಾರಾಯಣ ಮತ್ತು ಲಕ್ಷ್ಮಿನಾರಾಯಣಮ್ಮ ದಂಪತಿಗೆ ಎರಡು ತಿಂಗಳ ಶಿಶು ಸೇರಿ ಮೂವರು ಮಕ್ಕಳಿದ್ದಾರೆ. ಮಾರ್ಚ್ 17ರಂದು, ಲಕ್ಷ್ಮಿನಾರಾಯಣಮ್ಮ ಚೆನ್ನೂರು ಆರೋಗ್ಯ ಕೇಂದ್ರದಲ್ಲಿ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಪಾಸಣೆ ಮತ್ತು ಹೊಲಿಗೆ ತೆಗೆಸಲು ಪತಿ ಬಾಲನಾರಾಯಣ ಮಾರ್ಚ್ 28ರಂದು, ಪತ್ನಿ ಲಕ್ಷ್ಮಿನಾರಾಯಣಮ್ಮರನ್ನು ಅದೇ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು.
ನಂತರ ಲಕ್ಷ್ಮಿನಾರಾಯಣಮ್ಮ ಆರೋಗ್ಯ ಕೇಂದ್ರದಲ್ಲೇ ಇರಿಸಿ, ಪತಿ ಬಾಲನಾರಾಯಣ ಆರೋಗ್ಯ ಕೇಂದ್ರದ ಕೆಲವು ಸಿಬ್ಬಂದಿ, ಸ್ಥಳೀಯ ಮಹಿಳೆಯೊಬ್ಬರು ಶಾಮೀಲಾಗಿ ಶಿಶುವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದಾರೆ. ನಂತರ ಸಿಬ್ಬಂದಿ ತಾಯಿ ಬಳಿಯಿದ್ದ ಶಿಶುವನ್ನು ತೆಗೆದುಕೊಂಡು, ಆಕೆಯ ಪಕ್ಕದಲ್ಲಿ 50 ಸಾವಿರ ರೂಪಾಯಿ ಇಟ್ಟು ತೆರಳಿದ್ದಾರೆ. ಆ ನಂತರ ಬಾಲನಾರಾಯಣ ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಶಿಶುವಿನ ತಾಯಿ ಎರಡು ದಿನಗಳ ನಂತರ ಮೈದುಕೂರಿನ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್) ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಶಿಶು ಮಾರಾಟ ಸಂಬಂಧ ತನಿಖೆ ಆರಂಭಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

