ಸುದ್ದಿ

ಉಚ್ಛಾಟಿತ ವಚನಾನಂದ ಸ್ವಾಮೀಜಿ ಹಿಡಿತದಲ್ಲಿ ಹರಿಹರ ಗುರುಪೀಠದ ಪಂಚಮಸಾಲಿ ಮಠ: ವಿವಾದ ತೀವ್ರ

Share It

ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ಧರ್ಮದರ್ಶಿ ಮಂಡಳಿ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡಿದೆಯಾದರೂ ಸ್ವಾಮೀಜಿ ಮಾತ್ರ ಇನ್ನೂ ಮಠದಲ್ಲೇ ತಂಗಿದ್ದಾರೆ. ಏ.13ರಂದು ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ ಮಾಡಲಾಗಿದ್ದು, ಅವರ ವೈಯಕ್ತಿಕ ಸಾಮಾಗ್ರಿಗಳ ಜೊತೆಗೆ ಮಠ ತೊರೆಯುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಹೀಗಿದ್ದರೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯ ಮಠದಲ್ಲಿಯೇ ಸ್ವಾಮೀಜಿ ತಂಗಿದ್ದಾರೆ. ಕೋರ್ಟ್​ಗೆ ಕೇವಿಯಟ್ ಹಾಕಿ ಮಠದಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ.

ಇನ್ನು ಉಚ್ಚಾಟನೆಗೊಂಡಿರುವ ವಚನಾನಂದ ಶ್ರೀಗಳಿಗೆ ಧರ್ಮದರ್ಶಿ ಸಮಿತಿಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಭಕ್ತರೇ ಸ್ವಾಮೀಜಿಗೆ ಕಾವಲಾಗಿದ್ದಾರೆ. ಹರಿಹರ ತಾಲೂಕಿನ ಹಳ್ಳಿಗಳಿಂದ ಮಠ ಕಾಯಲು ಭಕ್ತರು ಬರುತ್ತಿದ್ದು, ಲೆಕ್ಕ ಕೊಡಿ ಅಭಿಯಾನದ ಉಸ್ತುವಾರಿ ಆಗಿರುವ ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಮಠದಲ್ಲಿ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಶ್ರೀಗಳು ಮಕ್ಕಳಿಂದ ಮಸಾಜ್​​ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದ ಧರ್ಮದರ್ಶಿ ಮಂಡಳಿ, ಮಕ್ಕಳಿಗೆ ವಚನಾನಂದಶ್ರೀ ಹಿಂಸೆ ನೀಡಿದ್ದಾರೆ ಎಂದು ಮಕ್ಕಳ ಹಕ್ಕು ಕಲ್ಯಾಣ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.


Share It

You cannot copy content of this page