ಬಳ್ಳಾರಿ: ನಗರದ ಹೊರವಲಯದ ಪಿ.ಡಿ. ಹಳ್ಳಿ ಭಾಗದಲ್ಲಿ ಪ್ಯಾರಾಚೂಟ್ ತರಬೇತಿ ವೇಳೆ 50 ಅಡಿ ಮೇಲಿನಿಂದ ಬಿದ್ದು ಸೇನಾ ಕರ್ನಲ್ಗೆ ಗಾಯವಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲಾಗಿದೆ.
ಪಿ.ಡಿ ಹಳ್ಳಿ ಭಾಗದಲ್ಲಿ ಹಲವು ವರ್ಷಗಳಿಂದಲೂ ಸೇನಾ ಸಿಬ್ಬಂದಿಗೆ ಪ್ಯಾರಾಚೂಟ್ ತರಬೇತಿ ನಡೆಯುತ್ತದೆ. ಶುಕ್ರವಾರ ಬೆಳಗ್ಗೆ 417 ಸೈನಿಕರು ಪ್ಯಾರಾಚೂಟ್ ಧರಿಸಿ ಆಗಸದಿಂದ ಜಿಗಿದಿದ್ದರು. ಈ ವೇಳೆ ಚಿನ್ನರಾಜ್ (25) ಎಂಬುವರು ನೆಲಕ್ಕೆ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿದಿದೆ. ಕೂಡಲೇ ಅವರನ್ನು ಬಳ್ಳಾರಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸೈನಿಕ ತರಬೇತಿ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಲಾಯಿತು. ಬಳ್ಳಾರಿಯ ಐಟಿಐ ಕಾಲೇಜು ಮೈದಾನಕ್ಕೆ ಬಂದಿಳಿದ ಸೇನಾ ಹೆಲಿಕಾಪ್ಟರ್ ಮೂಲಕ ಚಿನ್ನರಾಜ್ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ತಿಳಿಸಿದ್ದಾರೆ.
ಪ್ಯಾರಾಚೂಟ್ ಧರಿಸಿ ಜಿಗಿದವರು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಬಳಿಕ ಸೇನಾ ಬಸ್ಗಳ ಮೂಲಕ ಬೆಂಗಳೂರಿಗೆ ತೆರಳುವುದು ವಾಡಿಕೆ ಎಂದು ಪೊಲೀಸರು ಹೇಳಿದ್ದಾರೆ.

