ಬೆಂಗಳೂರು: ಕಾಂಗ್ರೆಸ್ ಪಕ್ಷ ಮಹಿಳಾ ವಂದನಾ (ಮಹಿಳೆಯರ ಮೀಸಲಾತಿ) ಬಿಲ್ಲನ್ನು ವಿರೋಧ ಮಾಡಿ ಸಮಗ್ರ ಭಾರತದ ಮಹಿಳಾ ಶಕ್ತಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ ನೀಯತ್ತು ಯಾವತ್ತೂ ಮಹಿಳೆಯರಿಗೆ ಮೀಸಲಾತಿ ಕೊಡಲು ಇರಲಿಲ್ಲ. ಮೂವತ್ತು ವರ್ಷದಿಂದ ಮಾಡಿಕೊಂಡು ಬಂದಿರುವುದನ್ನು ಈಗ ಮತ್ತೆ ಮುಂದುವರೆಸಿದ್ದಾರೆ. ಇದರಿಂದ ಅವರಿಗೆ ಮಹಿಳೆಯರ ಶಾಪ ತಟ್ಟೇ ತಟ್ಟುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ಒಂದು ಪ್ರಗತಿಪರವಾದ ಚಿಂತನೆ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕೆನ್ಮುವ ಅಭಿವೃದ್ಧಿ ಪರ ಚಿಂತನೆಗೆ ವಿರೋಧವಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಡೆದುಕೊಂಡಿವೆ. ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗದಿರುವುದನ್ನು ಇಡೀ ಭಾರತ ದೇಶ ಗಮನಿಸುತ್ತಿದೆ. ಈಗ ಕಾಂಗ್ರೆಸ್ ಸುಳ್ಳು ಸಮರ್ಥನೆ ಮಾಡಲು ಹೊರಟಿದೆ. ಯಾಕೆಂದರೆ 2023 ರಲ್ಲಿ ಶೇ 50% ರಷ್ಟು ಕ್ಷೇತ್ರಗಳ ಹೆಚ್ಚಳ ಮಾಡಬೇಕು. ಮುಂದಿನ ಜನಸಂಖ್ಯೆ ಆಧಾರದ ಮೇಲೆ ಮಾಡಬೇಕು ಅಂತ ಆಗಿತ್ತು.
2034 ಕ್ಕೆ ಜಾರಿ ಮಾಡಬೇಕೆಂದು ತೀರ್ಮಾನ ಆಗಿತ್ತು. ಅದನ್ನು 2029 ಕ್ಕೆ ಮಾಡಬೇಕು ಎನ್ನುವ ಕಾರಣದಿಂದ ಶೇ 50% ರಷ್ಟು ಸ್ಥಾನಗಳನ್ನು ಹೆಚ್ಚಿಗೆ ಮಾಡಬೇಕು. ಮಹಿಳೆಯರಿಗೆ ಶೇ 33% ರಷ್ಟು ಸ್ಥಾನ ಮೀಸಲಿಡಬೇಕು ಎಂದು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ 50% ರಷ್ಟು ಸ್ಥಾನಗಳನ್ನು ಹೆಚ್ಚಳ ಮಾಡಬೇಕೆನ್ನುವ ಉದ್ದೇಶದಿಂದ ತಂದರೆ ಇವರು ಅದರಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಈ ರಾಜಕೀಯ ಡೊಂಬರಾಟಕ್ಕೆ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈ ಕಟು ಸತ್ಯ ನಮಗೆಲ್ಲರಿಗೂ ಗೊತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎನ್ನುವ ವಾದವನ್ನು ಲೋಕಸಭೆಯಲ್ಲಿ ಮುಂದಿಟ್ಟಿರುವ ಕಾಂಗ್ರೆಸ್ ಮಿತ್ರಪಕ್ಷ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಶೇ 50% ರಷ್ಟು ಈಗಿರುವ ಲೋಕಸಭೆ, ವಿಧಾನಸಭೆ ಸ್ಥಾನಗಳಿಗೆ ಹೆಚ್ಚಳ ಮಾಡುತ್ತೇವೆ. ಅದಕ್ಕೆ ಕಾನೂನಿನಲ್ಲಿ ತಿದ್ದುಪಡಿ ತಂದು ಕಾನೂನಿನ ಭಾಗವಾಗಿ ಮಾಡುತ್ತೇವೆ ಅಂತ ಹೇಳಿದರೂ ವಿಪಕ್ಷಗಳು ಒಪ್ಪಲಿಲ್ಲ. ಇದನ್ನು ನೋಡಿದಾಗ ಕಾಂಗ್ರೆಸ್ ನವರಿಗೆ ಮಹಿಳಾ ಮೀಸಲಾತಿ ಬೇಕಾಗಿಲ್ಲ ಎನ್ನುವುದು ಬಹಳ ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

