ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೈಕ್, ಕಾರು, ಬಸ್ಗೆ ಲಾರಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಶಂಕೆ ಇದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮೇಲೆ ಲಾರಿ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಮರಿಯಮ್ಮನಹಳ್ಳಿ, ಹೊಸಪೇಟೆಗೆ ಮಾರ್ಗವಾಗಿ ಬೆಳ್ಳುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ತಡವಾಗಿದ್ದ ಕಾರಣ ಟೈಮ್ ಕವರ್ ಮಾಡಲು ಚಾಲಕ ವೇಗವಾಗಿ ಲಾರಿಯನ್ನು ಚಾಲನೆ ಮಾಡುತ್ತಿದ್ದ. ಬಿಎಂಎಂ ಫ್ಯಾಕ್ಟರಿ ಬಳಿ ಎದುರಿಗೆ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಲಾರಿ ಬೈಕ್ಗೆ ಗುದ್ದಿದೆ. ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ಕಾರು, KSRTC ಬಸ್ಗೆ ಲಾರಿಯನ್ನು ಚಾಲಕ ಡಿಕ್ಕಿ ಹೊಡೆಸಿದ್ದಾನೆ. ಅಂತಿಮವಾಗಿ ಬಸ್ಗೆ ಗುದ್ದಿದ ರಭಸಕ್ಕೆ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಆ ಪೈಕಿ ಐವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ ರವಾನೆ ಮಾಡಲಾಗಿದೆ.

