ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಪ್ಯಾಟ್ ಕಮ್ಮಿನ್ಸ್ ಪ್ರಸ್ತುತ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಗಾಯದಿಂದಾಗಿ ಕೆಲವು ತಿಂಗಳು ಕ್ರಿಕೆಟ್ ನಿಂದ ದೂರವಾಗಿದ್ದ ಕಮಿನ್ಸ್ ಇದೀಗ ಮೈದಾನಕ್ಕೆ ಮರಳಿದ್ದು, ಬೌಲಿಂಗ್ ಮತ್ತು ನಾಯಕತ್ವ ಎರಡರಲ್ಲೂ ಪ್ರಭಾವ ಬೀರುತ್ತಿದ್ದಾರೆ ಕಮಿನ್ಸ್ ಆಗಮನದಿಂದ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಏತನ್ಮಧ್ಯೆ, ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕಮ್ಮಿನ್ಸ್‌ಗೆ ದೊಡ್ಡ ಆಫರ್ ಸಿಕ್ಕಿದೆ ಎಂದು ವರದಿಗಳಾಗಿವೆ. ಅವರಿಗೆ ಬರೋಬ್ಬರಿ ರೂ.113 ಕೋಟಿ ರೂ. ಗೆ ಒಪ್ಪಂದ ಮಾಡಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
ಮುಂದಿನ ಮೂರು ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಪ್ರಮುಖ ಐಸಿಸಿ ಈವೆಂಟ್ಗಳು ನಡೆಯಲಿವೆ. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಪಂದ್ಯಾವಳಿಗಳು ನಡೆಯಲಿವೆ. ಅದೇ ಸಮಯದಲ್ಲಿ, ಕಮ್ಮಿನ್ಸ್ ಹಲವಾರು ವರ್ಷಗಳಿಂದ ಎಲ್ಲಾ ಸ್ವರೂಪಗಳಲ್ಲಿ ನಾಯಕ ಮತ್ತು ಆಟಗಾರನಾಗಿ ಕ್ರಿಕೆಟ್‌ನಲ್ಲಿ ಪ್ರಭಾವಬೀರುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಫ್ರಾಂಚೈಸ್ ಲೀಗ್‌ಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಅವರನ್ನು ಸ್ವಲ್ಪ ಸಮಯದವರೆಗೆ ಡೊಮೆಸ್ಟಿಕ್ ಲೀಗ್ಗಳಿಂದ ದೂರವಿಡಲು ಮತ್ತು ರಾಷ್ಟ್ರೀಯ ತಂಡದೊಂದಿಗೆ ಮುಂದುವರಿಸಲು ಆಶಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಅವರಿಗೆ ದೀರ್ಘಾವಧಿಯ ಒಪ್ಪಂದವನ್ನು ನೀಡಲಾಗಿದೆ ಎಂಬ ವರದಿಗಳಿವೆ.

ಕಮಿನ್ಸ್ಗೆ ಮೂರು ವರ್ಷಗಳ ಅವಧಿಗೆ 12 ಮಿಲಿಯನ್ ಡಾಲರ್ (ಸುಮಾರು ರೂ. 113 ಕೋಟಿ) ಮೊತ್ತದ ಬೃಹತ್ ಆಫರ್ ನೀಡಲಾಗಿದೆ ಎಂದು ವರದಿಗಳಿವೆ. ಅಂದರೆ, ವರ್ಷಕ್ಕೆ 4 ಮಿಲಿಯನ್ ಡಾಲರ್ ಪಡೆಯಲಿದ್ದಾರೆ. ಈ ದೊಡ್ಡ ಒಪ್ಪಂದದೊಂದಿಗೆ, ಕಮ್ಮಿನ್ಸ್ ಜೊತೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲು ಸಿಎ ಯೋಜಿಸುತ್ತಿದೆ. ಈ ಒಪ್ಪಂದದಡಿ 3 ವರ್ಷಗಳ ಕಾಲ ಕಮಿನ್ಸ್ ಏಕದಿನ, ಟಿ20 ಮತ್ತು ಟೆಸ್ಟ್‌ನ ಮೂರು ಸ್ವರೂಪಗಳಲ್ಲಿ ಮೊದಲ ಆಯ್ಕೆಯಾಗಿ ಆಸೀಸ್ ತಂಡಕ್ಕೆ ಆಡಬೇಕಾಗಿರುತ್ತದೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ ಒಪ್ಪಂದ ನಡೆದರೇ ಇದು ಕ್ರಿಕೆಟ್ ವಲಯದಲ್ಲೇ ಅತೀ ದೊಡ್ಡ ಒಪ್ಪಂದವಾಗಿರಲಿದೆ.

