ಬೆಂಗಳೂರು: ಭಾರತದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಕಳೆದ 10 ದಿನಗಳಲ್ಲಿ ಡೀಸೆಲ್ ಬೆಲೆ ಭೀಕರವಾಗಿ ₹7.81 ಹೆಚ್ಚಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಘೋರ ವೈಫಲ್ಯಕ್ಕೆ ಸಾಕ್ಷಿ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಲೆ ಏರಿಕೆ ಪರಿಣಾಮ ಕರ್ನಾಟಕ ರಾಜ್ಯ ಸಾರಿಗೆಗೆ ಬೀಳುತ್ತಿರುವ ಹೆಚ್ಚುವರಿ ಹೊರೆ ತಿಂಗಳಿಗೆ: ₹40 ಕೋಟಿ ಹಾಗೂ ವರ್ಷಕ್ಕೆ: ₹480 ಕೋಟಿ. ಜಾಗತಿಕ ತೈಲ ಬಿಕ್ಕಟ್ಟು ನಿರ್ವಹಣೆಯಲ್ಲಿ ಕೇಂದ್ರದ ವಿಫಲತೆಯು ಸಾಮಾನ್ಯ ಜನರಿಗೆ ಉಚಿತ ಹಾಗೂ ಕೈಗೆಟುಕುವ ಸಾರಿಗೆ ನೀಡುತ್ತಿರುವ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳನ್ನು ಆರ್ಥಿಕವಾಗಿ ಕಂಗಾಲು ಮಾಡಿದೆ ಎಂದು ತಿಳಿಸಿದ್ದಾರೆ
ಈ ದರ ಏರಿಕೆ ಕೇವಲ ಬಸ್ಸುಗಳಿಗಷ್ಟೇ ಸೀಮಿತವಾಗಿಲ್ಲ. ಇಡೀ ದೇಶದ ಸರಕು ಸಾಗಣೆಯ ಬೆನ್ನೆಲುಬಾಗಿರುವ ಸಾರಿಗೆ ಲಾರಿಗಳ (Transport Lorries) ಮೇಲೂ ಇದು ಮಾರಕ ಹೊರೆ ಉಂಟುಮಾಡಿದೆ. ಲಾರಿ ಬಾಡಿಗೆಗಳು ಗಗನಕ್ಕೇರುತ್ತಿರುವುದರಿಂದ ತರಕಾರಿ, ಹಾಲು, ದಿನಸಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆಗಳು (Daily Goods Price) ಕೂಡಾ ತೀವ್ರವಾಗಿ ಏರಿಕೆಯಾಗಲಿವೆ ಎಂದಿದ್ದಾರೆ
ಇತ್ತೀಚಿನ ಪಂಚ ರಾಜ್ಯಗಳ ಚುನಾವಣೆ ವೇಳೆ ತೈಲ ಬೆಲೆ ಏರಲ್ಲ ಎಂದು ಸುಳ್ಳು ಹೇಳಿ ಮತ ಪಡೆದ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಈಗ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ. ವಿಶ್ವಗುರು ಎಂದು ಸ್ವಯಂ ಘೋಷಿಸಿಕೊಂಡವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ರಿಯಾಯಿತಿ ದರದಲ್ಲಿ ಇಂಧನ ತರಲು ವಿಫಲರಾಗಿ, ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯವರೇ, ಈ ಕೂಡಲೇ ಈ ಜನವಿರೋಧಿ “ಪೆಟ್ರೋಲ್-ಡೀಸೆಲ್ ದರ ಏರಿಕೆ”ಯನ್ನು ಹಿಂಪಡೆಯಿರಿ. ಇಲ್ಲದಿದ್ದರೆ ದೇಶದ ರೈತರು, ಲಾರಿ ಚಾಲಕರು ಹಾಗೂ ಜನಸಾಮಾನ್ಯರು ಒಟ್ಟಾಗಿ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

