ಬೆಳಗಾವಿ: ಬೆಳಗಾವಿ ಮಹಾನಗರ ಪರಿಷತ್ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅಂಗೀಕರಿಸಬೇಕು. ಇಲ್ಲದೆ ಇದ್ದಲ್ಲಿ ಕರ್ನಾಟಕ ಬಂದ್ ಕರೆ ನೀಡಲಾಗುವುದು ಎಂದು ಕನ್ನಡ ಹೋರಾಟಗಾರರು ಇದೀಗ ಇಲ್ಲಿನ ಮೇಯರ್ ಗೆ ಎಚ್ಚರಿಕೆ ರವಾನೆ ಮಾಡಿದ್ದಾರೆ. ಜೂನ್ ಎರಡರವರೆಗೆ ಗಡುವು ನೀಡಿದ್ದು ಅಷ್ಟರ ಒಳಗೆ ಬೇಡಿಕೆ ಈಡೇರದೇ ಇದ್ದರೆ ಜೂನ್ 4ರಂದು ಬೆಂಗಳೂರಿನಲ್ಲಿ ಕನ್ನಡ ಹೋರಾಟಗಾರರು ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ಇಡೀ ಕರ್ನಾಟಕ ಬಂದ್ ಕರೆ ನೀಡುವುದಾಗಿ ಮಾಜಿ ಶಾಸಕ ಮತ್ತು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡಿದರು.
ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮಂಗಳವಾರ 20ಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಪರ ಠರಾವ್ ಅಂಗೀಕರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಆಗ್ರಹ ಮಾಡಿದ್ದಾರೆ. ಪಾಲಿಕೆಗೆ ಮುತ್ತಿಗೆ ಹಾಕಲು ನೂರಾರು ಸಂಖ್ಯೆಯಲ್ಲಿ ಕನ್ನಡ ಕಾರ್ಯಕರ್ತರೊಂದಿಗೆ ತೆರಳುತ್ತಿದ್ದಾಗ ವಾಟಾಳ್ ನಾಗರಾಜ್ ಅವರನ್ನು ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಕನ್ನಡ ಹೋರಾಟಗಾರರಾದ ಸಾ.ರಾ. ಗೋವಿಂದ, ಕೆ.ಆರ್. ಕುಮಾರ್, ಅಶೋಕ ಚಂದರಗಿ ಮೊದಲಾದವರು ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆ ತಕ್ಷಣ ಕರ್ನಾಟಕದ ಪರ ಠರಾವ್ ಅಂಗೀಕಾರ ಮಾಡಬೇಕು, ಇಲ್ಲದೆ ಇದ್ದರೆ ನಾವು ಯಾವುದೇ ಕಾರಣಕ್ಕೆ ಹೋರಾಟವನ್ನು ಮುಕ್ತಾಯಗೊಳಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಎಲ್ಲಿದೆ ?
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಮಹಾನಗರ ಪಾಲಿಕೆ ಯಾವ ನೆಲದಲ್ಲಿದೆ..? ಎಂಬುದನ್ನು ಪಾಲಿಕೆಯಲ್ಲಿ ಅಧಿಕಾರದಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ. ಇದು ಕರ್ನಾಟಕದ ಅವಿಭಾಜ್ಯ ಅಂಗ. ಮಹಾಜನ್ ವರದಿ ಜಾರಿ ಆಗಲೇಬೇಕು ಎಂದು ನಿರ್ಣಯ ಮಾಡಬೇಕು. ಮಾಡದಿದ್ದರೆ ಬೆಳಗಾವಿಯಲ್ಲಿ ಕಂಡು ಕೇಳರಿಯದ ರೀತಿಯ ಕ್ರಾಂತಿ ಆಗುತ್ತದೆ. ಇವತ್ತಿನಿಂದ ಒಂದು ವಾರದೊಳಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾನಜನ್ ವರದಿ ಜಾರಿಗೆ ತರಬೇಕು ಎಂದು ನಿರ್ಣಯ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ನಾವು ಗಡುವು ಕೊಡುತ್ತೇವೆ. ಆಗಲೂ ನೀವು ಎಚ್ಚೆತ್ತುಕೊಳ್ಳದಿದ್ದರೆ, ಜೂನ್4ರಂದು ಬೆಂಗಳೂರಲ್ಲಿಎಲ್ಲಾ ಕನ್ನಡ ಸಂಘಟನೆಗಳು ಸಭೆ ಸೇರುತ್ತೇವೆ. ಪ್ರವೀಣ ಶೆಟ್ಟಿ, ಶಿವರಾಮೇಗೌಡ, ನಾರಾಯಣಗೌಡ ಸೇರಿ ಎಲ್ಲ ಬಣಗಳ ಕನ್ನಡ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸುತ್ತೇವೆ. ಅಲ್ಲಿ ಅಖಂಡ ಕರ್ನಾಟಕ ಬಂದ್ ಗೆ ಕರೆ ಕೊಡುತ್ತೇವೆ ಎಂದರು.

