ಅಪರಾಧ ಸುದ್ದಿ

ಹಾರ್ಮುಜ್ ಬಳಿ ನಿಂತಿದ್ದ ಹಡಗಿನ ಮೇಲೆ ಅಮೆರಿಕ ದಾಳಿ: ಮೂವರು ಭಾರತೀಯ ನಾವಿಕರ ಸಾವು: ದೃಢಪಡಿಸಿದ ಕೇಂದ್ರ ಸಚಿವ

Share It

ಮುಂಬೈ (ಮಹಾರಾಷ್ಟ್ರ): ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ಮಿಲಿಟರಿ ದಾಳಿ ನಂತರ ಕಾಣೆಯಾಗಿದ್ದ ಎಂಟಿ ಸೆಟ್‌ಬೆಲ್ಲೊ ಹಡಗಿನಲ್ಲಿದ್ದ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಎಂದು ಕೇಂದ್ರ ಹಡಗು ಖಾತೆ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.

ಮೃತದೇಹಗಳನ್ನು ಪತ್ತೆಹಚ್ಚಿ ಗುರುತಿಸಿದ ಬಳಿಕ ಈ ಎಲ್ಲ ನಾವಿಕರ ಶವಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಸ್ವದೇಶಕ್ಕೆ ಕಳುಹಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪಲಾವ್ ಧ್ವಜ ಹೊತ್ತ ಎಂಟಿ ಸೆಟ್‌ಬೆಲ್ಲೊ ಹಡಗಿನಲ್ಲಿ ನಡೆದ ದುರಂತದ ಬಗ್ಗೆ ತಿಳಿದು ಆಘಾತವಾಗಿದೆ. ಈ ಘಟನೆ ದುರದೃಷ್ಟಕರ, ಕಾಣೆಯಾಗಿರುವ ಮೂವರು ಭಾರತೀಯ ನಾವಿಕರ ಶವಗಳನ್ನು ಪತ್ತೆಹಚ್ಚಿ ಗುರುತಿಸಿದ ಬಳಿಕ ಅವರು ಮೃತಪಟ್ಟಿದ್ದಾರೆ ಎಂಬುದನ್ನು ದೃಢಪಡಿಸಲಾಗಿದೆ ಎಂದು ಸೋನೋವಾಲ್ ಎಕ್ಸ್‌ ‌ನಲ್ಲಿ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಬಳಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ಖಚಿತಪಡಿಸಿತ್ತು.

ಹಡಗಿನೊಂದಿಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಮಾಹಿತಿಗಳನ್ನು ಇನ್ನು ಕೂಡ ಪರಿಶೀಲಿಸಲಾಗುತ್ತಿದೆ ಎಂದು FSUI ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್ ತಿಳಿಸಿದ್ದರು. 

“ನಮಗೆ ಹಡಗಿನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಇಬ್ಬರು ಸಾವನ್ನಪ್ಪಿದ್ದಾರೆ. ಚೀಫ್ ಇಂಜಿನಿಯರ್ ಇನ್ನು ಕೂಡ ಕಾಣೆಯಾಗಿದ್ದಾರೆ. ಈ ಮೂವರು ನಾವಿಕರು ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಸೇರಿದವರಾಗಿದ್ದಾರೆ” ಎಂದು ಮಾಹಿತಿ ನೀಡಿದ್ದರು. ಆದರೆ ಈಗ ಮೂವರು ನಾವಿಕರು ಮೃತಪಟ್ಟಿದ್ದಾರೆ ಎಂಬು ಖಚಿತವಾಗಿದೆ. ಇದನ್ನು ಕೇಂದ್ರ ಸಚಿವರೇ ದೃಢಪಡಿಸಿದ್ದಾರೆ.


Share It

You cannot copy content of this page