ಸುದ್ದಿ

ಕೊಪ್ಪಳ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಭೀಕರ ರಸ್ತೆ ಅಪಘಾತ, ಐವರ ಸಾವು

Share It

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಸಮೀಪದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ನಿವಾಸಿಗಳು ಓಮಿನಿ ವಾಹನದಲ್ಲಿ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ, ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಶೋಕ್ ಲೇಲ್ಯಾಂಡ್ ಲಾರಿ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರು ಬರುತ್ತಿದ್ದ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಕೆಂಚಮ್ಮ ಬಾಳೆಕಾಯಿ (35), ಅಮೃತಾ ಕೋಟ್ಯಾಳ್ (25), ರಮೇಶ್ ಬಳ್ಳಾರಿ (45) ಹಾಗೂ ಪ್ರವೀಣ್ ಬಾಳೆಕಾಯಿ (23) ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಚಿನ್ಮಯ (30) ಎಂಬುವರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಆರು ಮಂದಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Share It

You cannot copy content of this page