ಮೇದಿನಿನಗರ (ಜಾರ್ಖಂಡ್): ಜಾರ್ಖಂಡ್ನ ಪಲಮುದಲ್ಲಿ ಒಂದೇ ಕುಟುಂಬದ ಐವರ ಸರಣಿ ಸಾವಿಗೆ ಕಲಬೆರಿಕೆ ಯುಕ್ತ ಸಾಸಿವೆ ಎಣ್ಣೆಯೇ ಕಾರಣ ಎಂಬುದು ವರದಿಯ್ಲಲಿ ದೃಢಪಟ್ಟಿದೆ. ಅತ್ಯಂತ ವಿಷಕಾರಿ ಆರ್ಗೆಮೋನ್ ಮೆಕ್ಸಿಕಾನಾ ಮಿಶ್ರಿತ ಸಾಸಿವೆ ಎಣ್ಣೆ ಸೇವಿಸಿದ್ದರಿಂದ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಪ್ರಯೋಗಾಲಯ ವರದಿಯಲ್ಲಿ ಬಹಿರಂಗವಾಗಿದೆ.
ಪಡ್ವಾದ ಬ್ಲಾಕ್ನಲ್ಲಿರುವ ಸಿಕ್ಕಾ ಗ್ರಾಮದಲ್ಲಿ ಹತ್ತು ದಿನಗಳ ಅವಧಿಯಲ್ಲಿ ಒಂದೇ ಕುಟುಂಬದ ಐದು ಸದಸ್ಯರು ಸಾವನ್ನಪ್ಪಿದ್ದರು. ಮೃತರ ಅವರ ದೇಹದ ಭಾಗಗಳಲ್ಲಿ ಗಂಭೀರ ಊತ ಕಾಣಿಸಿಕೊಂಡಿತ್ತು. ಸಾವಿನ ನಂತರ, ರಾಜ್ಯ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆಯ ಜಂಟಿ ತಂಡಗಳು ಸಂತ್ರಸ್ತ ಕುಟುಂಬದ ಮನೆಯಿಂದ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇದೀಗ ರಾಂಚಿಯ ಆಹಾರ ಪರೀಕ್ಷಾ ಪ್ರಯೋಗಾಲಯದ ಆಹಾರ ಪರೀಕ್ಷಾ ಕೇಂದ್ರ ವರದಿ ನೀಡಿದ್ದು, ಕುಟುಂಬ ಸದಸ್ಯರು ಸೇವಿಸುವ ಸಾಸಿವೆ ಎಣ್ಣೆಯಲ್ಲಿ ‘ಕಟೈಲಾ’ ಅಥವಾ ‘ಪೀಲಾ ಧಾತುರಾ’ ಎಂದು ಕರೆಯಲ್ಪಡುವ ಆರ್ಗೆಮೋನ್ ಮೆಕ್ಸಿಕಾನಾ ಎಣ್ಣೆ ಮಿಶ್ರಣವಾಗಿದೆ ಎಂದು ದೃಢಪಟ್ಟಿದೆ.
ಕುಟುಂಬದ ಹಿರಿಯ ಕುಲದೀಪ್ ಮಹ್ತೊ ಅವರು ಜೂನ್ 19 ರಂದು ನಿಧನರಾಗಿದ್ದರು. ಆ ಬಳಿಕ ಇಬ್ಬರು ಸಹೋದರಿಯರಾದ ಬಬಿತಾ ಕುಮಾರಿ ಮತ್ತು ಇಂದು ಕುಮಾರಿ ಕ್ರಮವಾಗಿ ಜೂನ್ 20 ಮತ್ತು ಜೂನ್ 26 ರಂದು ಮೃತಪಟ್ಟಿದ್ದರು. ಕುಲದೀಪ್ ಮಹ್ತೊ ಅವರ ಪತ್ನಿ ಶ್ವೇತಾ ಮತ್ತು ಅವರ ಮಗ ನಕುಲ್ ಮಹ್ತೊ ಜೂನ್ 28 ರಂದು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (RIMS) ಚಿಕಿತ್ಸೆ ಪಡೆಯುತ್ತಿದ್ದಾಗ ಇಹಲೋಕ ತ್ಯಜಿಸಿದ್ದರು.
ಮೆದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ. ಆರ್. ಕೆ. ರಂಜನ್ ಮಾತನಾಡಿದ್ದು, ‘ರೋಗ ಲಕ್ಷಣಗಳ ಸ್ವರೂಪದಿಂದಾಗಿ ಚಿಕಿತ್ಸೆ ಆರಂಭದಿಂದಲೇ ಆರ್ಗೆಮೋನ್ ವಿಷದ ಅನುಮಾನಗಳು ಕಂಡುಬರುತ್ತಿದ್ದವು. ಈ ವಿಷವು ಮಾನವ ಸೇವನೆಗೆ ಅತ್ಯಂತ ಅಪಾಯಕಾರಿ ಮತ್ತು ಇದನ್ನು ಪ್ರಾಣಿಗಳಿಗೆ ಮಾತ್ರ ಬಳಸಬೇಕು. ನನ್ನ ವೃತ್ತಿಜೀವನದಲ್ಲಿಯೇ ಇಂತಹ ವಿಷದ ಪ್ರಕರಣ ನೋಡಿರುವುದು ಎರಡನೇ ಬಾರಿ’ ಎಂದಿದ್ದಾರೆ.
ಪಲಮು ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾರೆ. ಮೊದಲ ಮೂವರು ಮೃತರ ಮರಣೋತ್ತರ ಪರೀಕ್ಷೆಯನ್ನು ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಾಡಲಾಗಿದ್ದರೂ, ಪರೀಕ್ಷೆಯ ಫಲಿತಾಂಶಗಳು ಸಾವಿಗೆ ನಿಖರ ಕಾರಣ ಹೇಳುವಲ್ಲಿ ವಿಫಲವಾಗಿವೆ. ಪಡ್ವಾ ಎಸ್ಹೆಚ್ಒ ಅಂಕಿತ್ ಕುಮಾರ್ ಪ್ರಕಾರ, ‘ವಿಷಪ್ರಾಶನದ ಪ್ರಕರಣ ಸಾಬೀತುಪಡಿಸಲು ಮೃತರ ಒಳಾಂಗಗಳನ್ನು ಹಾಗೂ ರಕ್ತ ಮತ್ತು ಮೂತ್ರದ ಮಾದರಿಗಳೊಂದಿಗೆ, ರಾಸಾಯನಿಕ ಪರೀಕ್ಷೆಗಾಗಿ FSLಗೆ ಕಳುಹಿಸಲಾಗುತ್ತಿದೆ.

