ಸುದ್ದಿ

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣ: 150 ವರ್ಷದ ನಂತರ ಭೀಕರ ಕ್ಷಾಮ

Share It

ಬೆಂಗಳೂರು: ರಾಜ್ಯದಲ್ಲಿ 150 ವರ್ಷದ ಹಿಂದಿನ ಭೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿದ್ದು, ಕಂಡುಕೇಳರಿಯದ ಕ್ಷಾಮ ತಲೆದೋರಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೇಂದ್ರ ಸರಕಾರ ದೇಶದಲ್ಲಿ ಮುಂಗಾರು ಮಳೆ ಕ್ಷೀಣವಾಗಿರುವ ಕುರಿತು ಎಲ್ಲ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ. ಕುಡಿಯುವ ನೀರಿಗೆ ಹಾಹಾಕಾರ ತಲೆದೋರದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚನೆಗಳನ್ನ ನೀಡಿದೆ.

ಕೇಂದ್ರದ ಸೂಚನೆಯಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಈ ಕುರಿತು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಬರಗಾಲ ಪರಿಸ್ಥೀತಿಯನ್ನು ಎದುರಿಸಲು ಸಜ್ಜಾಗಿರುವಂತೆ ಜನರಿಗೆ ಮನವಿ ಮಾಡಿಕೊಂಡಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಅಂತಿಮ ಘಟ್ಟದಲ್ಲಿದ್ದು, ಬೆಳೆಗಳಿಗೆ ನೀರು ಹರಿಸದಂತೆ ತಾಕೀತು ಮಾಡಲಾಗಿದೆ.

ಕಂದಾಯ ಇಲಾಖೆ ಈಗಾಗಲೇ ಏಳು ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ಡೆಡ್ ಸ್ಟೋರೇಜ್ ಹಂತ ತಲುಪಿರುವ ಜಲಾಶಯಗಳಲ್ಲಿ ಯಾವುದೇ ಕಾರಣಕ್ಕೂ ಬೆಳೆಗಳಿಗೆ ನೀರು ಹರಿಸಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ ನೀರು ಕುಡಿಯುವ ಕಾರಣಕ್ಕೆ ಮಾತ್ರವೇ ಬಳಕೆಯಾಗಬೇಕು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಕುಡಿಯುವ ನೀರು ಒದಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸರಕಾರ ಸೂಚಿಸಿದ್ದು, ಜನತೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂಬ ಸಲಹೆ ನೀಡಿದೆ. ದೇಶಾದ್ಯಂತ ಬರದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಇದನ್ನು ಎದುರಿಸಲು ಸಜ್ಜಾಗುವಂತೆ ಮನವಿ ಮಾಡಿಕೊಳ್ಳಲಾಗಿದೆ.


Share It

You cannot copy content of this page