ಬೆಂಗಳೂರು: ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ನಗರದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2014ರಲ್ಲಿ ನಡೆದಿದ್ದ ಆರು ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣ ಸಂಬಂಧ ಈವರೆಗೂ ವಿಚಾರಣೆ ಪೂರ್ಣಗೊಳ್ಳದ ಕ್ರಮಕ್ಕೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಎಂಟು ವಾರಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿದೆ.
ಪ್ರಕರಣ ಸಂಬಂಧ ಕಾನೂನಾತ್ಮಕ ತಾಂತ್ರಿಕ ಅಂಶಗಳಡಿ ಸಂತ್ರಸ್ತ ಬಾಲಕಿ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದ್ದು, ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ. ಅಲ್ಲದೆ, ಸುಪ್ರೀಂಕೋರ್ಟ್ ಪ್ರಕರಣ ಉಲ್ಲೇಖಿಸಿ, ತ್ವರಿತ ವಿಚಾರಣೆ ಹಕ್ಕು ಎಂಬುದು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸಬಹುದಾದ ಅಥವಾ ತಡೆಹಿಡಿಯಬಹುದಾದ ಕಾರ್ಯವಿಧಾನದವಲ್ಲ. ಇದು ಸಂವಿಧಾನದ 21ನೇ ವಿಧಿಯ ಅತ್ಯಗತ್ಯ ಅಂಶ, ಪೋಕ್ಸೊ ಪ್ರಕರಣಗಳು ಒಂದು ವರ್ಷದೊಳಗೆ ಕಾನೂನು ಪ್ರಕ್ರಿಯೆ ದಾಟಿ ಅಂತಿಮ ಹಂತ ತಲುಪಬೇಲಾಗಿದೆ. ವಿಚಾರಣೆಯನ್ನು ಪದೇ ಪದೆ ಮುಂದೂಡುವ ಸಂಸ್ಕೃತಿ ಖಂಡನೀಯ. ಆದ್ದರಿಂದ, ಉಭಯ ಪಕ್ಷಗಾರರು ಈ ಆದೇಶ ತಲುಪಿದ ಎಂಟು ವಾರಗಳಲ್ಲಿ ವಿಚಾರಣಾ ಪ್ರಕ್ರಿಯೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸಹಕರಿಸಬೇಕು ಎಂದು ಪೀಠ ಸೂಚನೆ ನೀಡಿದೆ.
ಪ್ರಕರಣವನ್ನು ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ನೆಪದಲ್ಲಿ ಅನಗತ್ಯ ಮುಂದೂಡಿಕೆ ಮಾಡಲಾಗಿದೆ. ಈ ಪ್ರಕ್ರಿಯೆ ಒಪ್ಪುವುದಕ್ಕೆ ಸಾಧ್ಯವಿಲ್ಲ. ಇದೊಂದು ವಿವೇಚನಾರಹಿತ ನಡೆ. ಇಂತಹ ವಿಷಯಗಳಲ್ಲಿ ವಿಶೇಷವಾಗಿ ಪ್ರಾಸಿಕ್ಯೂಷನ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಗರೂಕವಾಗಿ ಇರಬೇಕಿತ್ತು ಎಂದು ಹೈಕೋರ್ಟ್ ಪೀಠ ಹೇಳಿದೆ. ಅಲ್ಲದೆ, ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ–1973ರ ಕಲಂ 164ರ ಅಡಿಯಲ್ಲಿ ಸಂತ್ರಸ್ತ ಬಾಲಕಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆ ಪ್ರತಿಯಲ್ಲಿ ಬಾಲಕಿ ಮತ್ತು ಮ್ಯಾಜಿಸ್ಟ್ರೇಟ್ ಸಹಿಗಳು ಇಲ್ಲವೆಂಬ ಕಾರಣಕ್ಕಾಗಿ ಹೇಳಿಕೆ ದಾಖಲು ಮಾಡಿಕೊಂಡ ಮ್ಯಾಜಿಸ್ಟ್ರೇಟ್ ಅವರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಪೀಠ ತಿರಸ್ಕರಿಸಿದೆ.
ಆರು ವರ್ಷದ ಬಾಲಕಿಯ ಮೇಲೆ 2014ರ ಜುಲೈ 14ರಂದು ಅತ್ಯಾಚಾರ ನಡೆದಿದೆ ಎಂಬ ಆರೋಪದಡಿ ಪೊಲೀಸರು ಶಾಲೆಯ ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿದ್ದರು. ಜಿಮ್ನಾಸ್ಟಿಕ್ಸ್ ಕ್ಲಾಸ್ ಮುಗಿದ ನಂತರ ಬಾಲಕಿಯನ್ನು ಕೊಠಡಿಯಲ್ಲೇ ಉಳಿಸಿಕೊಂಡು ಇಬ್ಬರೂ ಅತ್ಯಾಚಾರ ಎಸಗಿರುವುದು ತನಿಖೆಯಿಂದ ಗೊತ್ತಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಭಾರತೀಯ ದಂಡ ಸಂಹಿತೆ–1860ರ ಕಲಂ 376, 202 ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012ರ (ಪೋಕ್ಸೊ) ಕಲಂ 4, 6 ಮತ್ತು 21ರ ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

