ಬೆಂಗಳೂರು ವಿವಿ: ರಾಜ್ಯಾದ್ಯಂತ 75 ವಸತಿ ನಿಲಯಗಳಿಗೆ ಬುದ್ಧನ ವಿಗ್ರಹ ವಿತರಣೆ: ಡಾ. ಜಿ. ಪರಮೇಶ್ವರ್ ರವರ 75 ನೇ ಹುಟ್ಟುಹಬ್ಬ ವಿಶೇಷ ರೀತಿ ಆಚರಣೆ
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದ ಪಿಜಿ -2 ಪುರುಷ ವಸತಿ ನಿಲಯದಲ್ಲಿ ಇಂದು ಬೆಳಗ್ಗೆ 8.30 ಗಂಟೆಗೆ ಗುರುವಾರದಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರ 75ನೇ ಜನ್ಮದಿನದ ಆಚರಣೆಯ ಅಂಗವಾಗಿ ‘ಅಂಬೇಡ್ಕರ್ ವಾದಿಗಳ ನಡೆ ಬುದ್ಧನ ಕಡೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೆಂಗಳೂರು ವಿವಿಯ ಎಂಸಿಎ ವಿಭಾಗದ ಮುಖ್ಯಸ್ಥರು ಹಾಗೂ ದೂರ ಶಿಕ್ಷಣ ನಿರ್ದೇಶಕ ಪ್ರೊ. ಮುರುಳಿಧರ್ ಬಿ.ಎಲ್, ಅವರು ಈ ಕಾರ್ಯಕ್ರಮದಲ್ಲಿ ರಾಜ್ಯದ 24 ಜಿಲ್ಲೆಗಳಲ್ಲಿ ಹರಡಿರುವ ಸಮಾಜ ಕಲ್ಯಾಣ ಇಲಾಖೆಯ 75 ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಬುದ್ಧನ ಒಂದು ಅಡಿ ಎತ್ತರದ ಹಿತ್ತಾಳೆ ವಿಗ್ರಹಗಳನ್ನು ಏಕಕಾಲಕ್ಕೆ ವಿತರಿಸಲಾಯಿತು ಎಂದರು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಬುದ್ಧನ ಕರುಣೆ, ಸಮಾನತೆ, ಅಹಿಂಸೆ ಮತ್ತು ಸಹೋದರತ್ವದ ತತ್ವಗಳನ್ನು ವಿದ್ಯಾರ್ಥಿ ಸಮುದಾಯದಲ್ಲಿ ಪಸರಿಸುವುದು ಮತ್ತು ಬುದ್ಧನ ತತ್ವಶಾಸ್ತ್ರದ ಮೂಲಕ ವಿಶ್ವ ಶಾಂತಿಯ ಸಂದೇಶವನ್ನು ಸಾರುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ವಸತಿ ನಿಲಯಗಳಲ್ಲಿ ವಾಸಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ಬುದ್ಧನ ವಿಗ್ರಹಗಳ ಮೂಲಕ ಸಾಮಾಜಿಕ ನ್ಯಾಯ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶ ತಲುಪಿಸುವ ಗುರಿಯನ್ನೂ ಈ ಕಾರ್ಯಕ್ರಮ ಹೊಂದಿದೆ ಎಂದರು.
ಈ ವಿಗ್ರಹ ವಿತರಣಾ ಕಾರ್ಯಕ್ರಮವು ಈ ಕೆಳಗಿನ ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ನಡೆಯಲಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಮೈಸೂರು, ಕೋಲಾರ, ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ವಿಜಯಪುರ, ಮತ್ತು ಯಾದಗಿರಿ, ಪ್ರತಿಯೊಂದು ಜಿಲ್ಲೆಯಲ್ಲಿಯೂ ಕೂಡ ಆಯಾ ವಸತಿ ನಿಲಯಗಳ ವಾರ್ಡನ್/ಮೇಲ್ವಿಚಾರಕರು ಹಾಗೂ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಾವಿರಾರು ಡಾ. ಜಿ. ಪರಮೇಶ್ವರ್ ರವರ ಅಭಿಮಾನಿಗಳು ಕಾರ್ಯಕ್ರಮದ ಸಂಘಟನೆಯ ಹೊಣೆ ಹೊತ್ತಿದ್ದವುದು ವಿಶೇಷ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿಯ ಎಂಸಿಎ ವಿಭಾಗದ ಮುಖ್ಯಸ್ಥರು ಹಾಗೂ ದೂರ ಶಿಕ್ಷಣ ನಿರ್ದೇಶಕ ಪ್ರೊ. ಮುರುಳಿಧರ್ ಬಿ.ಎಲ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿ ಜಿ, ಪ್ರದಾನ ಕ್ಷೇಮಪಾಲಕ ಡಾ. ಡಿ.ಕೆ. ಪ್ರಭಾಕರ್, ವಸತಿ ನಿಲಯದ ಸಿಬ್ಬಂದಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

