ಉಪಯುಕ್ತ ರಾಜಕೀಯ ಸುದ್ದಿ

ಸದ್ಯದಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ನಿರ್ಧಾರ: ಅತುಲ್ ತಿವಾರಿ ಸಮಿತಿಯಿಂದ ಒಂದೆರಡು ದಿನದಲ್ಲಿ ವರದಿ

Share It

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೇಮಕಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಉಪಸ್ಥಿತಿಯಲ್ಲಿ ರಾಜಧಾನಿಯ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ಹೆಚ್ಚಿಸುವುದು ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುವ ಸಂಬಂಧ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿರುವುದರಿಂದ ಪ್ರಯಾಣ ದರವನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಪ್ರತಿ ಲೀಟರ್ ಡೀಸೆಲ್ ಬೆಲೆ 15 ರಿಂದ 16 ರೂಪಾಯಿ ಹೆಚ್ಚಳವಾಗಿದ್ದು, ನಮ್ಮ ಸಾರಿಗೆ ನಿಗಮಗಳಿಗೆ ವಾರ್ಷಿಕ 8 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಹೇಳಿದರು.

ಸಿಎಂ ಅನುಮೋದನೆ ನಂತರ ನಿರ್ಧಾರ: ಅತುಲ್ ತಿವಾರಿ ಅವರು ಎಲ್ಲಾ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ದು, ವರದಿ ನೀಡಲಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ, ಮುಖ್ಯಮಂತ್ರಿಗಳ ಅನುಮೋದನೆ ಪಡೆದ ನಂತರ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

2 ತಿಂಗಳಲ್ಲಿ ಶಕ್ತಿ ಕಾರ್ಡ್ ವಿತರಣೆ: ಮಹಿಳೆಯರಿಗೆ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದರನ್ವಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯದಂತೆ ಎಲ್ಲಾ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು.

ಅನ್ಯ ರಾಜ್ಯದ ಮಹಿಳೆಯರೂ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲು ಮತ್ತು ಅವರ ಪ್ರಯಾಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ ಎಂದರು.

ಮೊದಲ ಹಂತದಲ್ಲಿ ಒಂದು ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುವ ದಿಸೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಎರಡು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಸಿದ್ಧವಾಗಲಿವೆ ಮತ್ತು ಮಹಿಳೆಯರಿಗೆ ವಿತರಣೆ ಮಾಡಲಾಗುತ್ತದೆ ಎಂದು ಬೈರತಿ ಸುರೇಶ್ ತಿಳಿಸಿದರು.

ಬೆಂಗಳೂರಿಗೆ ಹಂತ ಹಂತವಾಗಿ 4500 ಬಸ್: ಕೇಂದ್ರ ಸರ್ಕಾರದ ಸಹಯೋಗದಲ್ಲಿ 4500 ಎಲೆಕ್ಟ್ರಿಕ್ ಬಸ್ ಗಳನ್ನು ಬಿಎಂಟಿಸಿಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಬಸ್ ಗಳು ಹಂತಹಂತವಾಗಿ ರಾಜಧಾನಿಯ ನಾಗರಿಕರ ಸೇವೆಗೆ ಲಭ್ಯವಾಗಲಿವೆ. ಈ ಬಸ್ ಗಳ ಸಂಚಾರದಿಂದ ನಗರದ ಸಾರಿಗೆ ದಟ್ಟಣೆ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ ಎಂದು ಸಾರಿಗೆ ಸಚಿವರು ತಿಳಿಸಿದರು.

ಅರ್ಧ ಹೆಲ್ಮೆಟ್ ಗೆ ಅರ್ಧಚಂದ್ರ: ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್ ಅನ್ನು ಬಳಸುವಂತಿಲ್ಲ. ಈ ಅಸುರಕ್ಷಿತ ಅರ್ಧ ಹೆಲ್ಮೆಟ್ ಉತ್ಪಾದನೆ ಮತ್ತು ತಯಾರಿಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಈ ಸಂಬಂಧ ನಿಯಮ ರೂಪಿಸಿ ಅರ್ಧ ಹೆಲ್ಮೆಟ್ ತಯಾರಿಸುವ ಎಲ್ಲಾ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಮತ್ತು ತಯಾರಿಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪ್ರಮುಖ ರಸ್ತೆಗಳಲ್ಲಿ ಮತ್ತೆ ಪ್ರತ್ಯೇಕ ಬಸ್ ಮಾರ್ಗ: ಮೆಟ್ರೋ ರೈಲು ಕಾಮಗಾರಿ ಹಿನ್ನೆಲೆಯಲ್ಲಿ ಈ ಹಿಂದೆ ಬಿಎಂಟಿಸಿ ಸಂಚಾರಕ್ಕೆ ಇದ್ದ ಪ್ರತ್ಯೇಕ ಮಾರ್ಗವನ್ನು ರದ್ದುಪಡಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳಲ್ಲಿ ಮತ್ತೆ ಪ್ರತ್ಯೇಕ ಪಥವನ್ನು ಪರಿಚಯಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಒನ್ ವೇಯಲ್ಲಿ ಸಂಚರಿಸಿದರೆ ಭಾರೀ ದಂಡ: ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಈಗ ಇರುವ 500 ರೂಪಾಯಿ ದಂಡವನ್ನು 5000 ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಒನ್ ವೇಯಲ್ಲಿ ವಾಹನ ಚಲಾಯಿಸಿದರೂ 5000 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.


Share It

You cannot copy content of this page