ರಾಜಕೀಯ ಸುದ್ದಿ

ಶಿಕಾರಿಪುರದಿಂದಲೇ ರಾಜಕೀಯ ‘ಶಿಕಾರಿ’ ಆರಂಭ: ಸಚಿವ ಮಧು ಬಂಗಾರಪ್ಪ

Share It

ಶಿಕಾರಿಪುರ: ಶಿಕಾರಿಪುರದಿಂದ ರಾಜಕೀಯ ‘ಶಿಕಾರಿ’ ಇಂದಿನಿಂದಲೇ ಆರಂಭವಾಗಿದೆ. ಶಿಕಾರಿಯಾಡುವ ಜವಾಬ್ದಾರಿಯನ್ನು ಇಲ್ಲಿನ ಜನತೆ ತೆಗೆದುಕೊಳ್ಳಲಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷದಿಂದ ಇಲ್ಲಿ ಯಾರು ಜನಪ್ರತಿನಿಧಿಯಾಗುತ್ತಾರೋ ಅವರು ಕೇವಲ ನಾಯಕರಾಗಿರದೆ, ಜನರ ಸೇವಕರಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು ನಾಲ್ಕುವರ್ಷಗಳಾದ ನೆನಪಿನಲ್ಲಿ ಕೆಪಿಸಿಸಿ ಶಿಕಾರಿಪುರದಲ್ಲಿ ಆಯೋಜಿಸಿದ್ದʻಭಾರತ ಜೋಡೋ ಯಾತ್ರೆ- 2.0ʼ ರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವೇ ಬಂದೂಕಿನಂತೆ ಕೆಲಸ ಮಾಡಿದರೆ, ಜನರು ಗುಂಡಿನಂತೆ ಮತ ದಾಳಿ ನಡೆಸಿ, ಶಿಕಾರಿಪುರದಲ್ಲಿ ಬದಲಾವಣೆಯನ್ನು ತರಲಿದ್ದಾರೆ ಎಂದು ಹೇಳಿದರು.

ಕೇವಲ ಐದು ದಿನಗಳಲ್ಲಿ ಭಾರತ್ ಜೋಡೋ 2.0 ಪಾದಯಾತ್ರೆ ಆಯೋಜಿಸಲಾಗಿದ್ದು, ನಿರೀಕ್ಷೆಗೂ ಮೀರಿ ಜನರು ಭಾಗವಹಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಸಂಘಟನಾ ಶಕ್ತಿ ಹಾಗೂ ಜನರ ಬೆಂಬಲವನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಹಾಕಿಕೊಟ್ಟ ಮಾರ್ಗದರ್ಶನ ನಾವೆಲ್ಲರೂ ಎತ್ತಿಹಿಡಿದಿದ್ದೇವೆ ಎಂದರು.

ರಾಹುಲ್ ಗಾಂಧಿ ಅವರ ತ್ಯಾಗ ಸ್ಮರಣೀಯ: ದೇಶವನ್ನು ಒಗ್ಗೂಡಿಸಿ, ಜನರನ್ನು ಒಂದುಗೂಡಿಸಿಕೊಂಡು ಸಾಗಬೇಕು ಎಂಬ ಉದ್ದೇಶದಿಂದ ರಾಹುಲ್ ಗಾಂಧಿ ಅವರು 2022ರಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಸಿದರು. ಆ ಯಾತ್ರೆ ಕರ್ನಾಟಕಕ್ಕೆ ಆಗಮಿಸಿ ನಾಲ್ಕು ವರ್ಷಗಳು ಕಳೆದಿವೆ. ದೇಶಕ್ಕಾಗಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದರೂ ರಾಹುಲ್ ಗಾಂಧಿ ಅವರು ಜನರೊಂದಿಗೆ ಬೆರೆಯುವ ಉದ್ದೇಶದಿಂದ ಐತಿಹಾಸಿಕ ಪಾದಯಾತ್ರೆ ನಡೆಸಿದರು ಎಂದು ಶ್ರೀ ಮಧು ಬಂಗಾರಪ್ಪ ಹೇಳಿದರು.

ಒಡೆದು ಆಳುವ ರಾಜಕಾರಣಕ್ಕೆ ಉತ್ತರ: ಶಿಕಾರಿಪುರದಲ್ಲಿ ಕೆಲವರು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಪಕ್ಷ ಒಂದಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನು ಭಾರತ್ ಜೋಡೋ 2.0 ಪಾದಯಾತ್ರೆ ನೀಡಿದೆ. ಇದು ಕೇವಲ ಪಾದಯಾತ್ರೆಯಲ್ಲ; ಇದರ ಸಂದೇಶ ಪ್ರತಿಯೊಂದು ಮನೆಗೂ ತಲುಪಬೇಕು ಎಂದರು.

ಭೂಮಿ ಹಕ್ಕು, ಉಚಿತ ಪಂಪ್‌ಸೆಟ್ ನೆನಪಿಸಿದ ಮಧು: ಶಿಕಾರಿಪುರದ ಜನರಿಗೆ ಭೂಮಿ ಹಕ್ಕು ನೀಡಿದವರು ಯಾರು ಎಂಬುದನ್ನು ಜನರು ನೆನಪಿಸಿಕೊಳ್ಳಬೇಕು. ದೇವರಾಜ ಅರಸು ಅವರು ಭೂಮಿ ಹಕ್ಕು ನೀಡಿದರು. ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರಿಗೆ ಉಚಿತ ಪಂಪ್‌ಸೆಟ್ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು. 1990ರಲ್ಲಿ ದೇಶದ ಬೇರೆಡೆ ಉಚಿತ ಪಂಪ್‌ಸೆಟ್ ನೀಡದ ಸಂದರ್ಭದಲ್ಲಿ ಕರ್ನಾಟಕದ ರೈತರಿಗೆ ಈ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ಮಧು ಬಂಗಾರಪ್ಪ ಸ್ಮರಿಸಿದರು. ಶಿಕಾರಿಪುರದ ಜನರಿಗೆ ಸಂಪೂರ್ಣವಾಗಿ ಭೂಮಿ ಹಕ್ಕು ದೊರೆತಿಲ್ಲ. ಈ ವಿಚಾರದಲ್ಲಿ ಜನರಿಗೆ ಅನ್ಯಾಯವಾಗಿದೆ. ಭೂಮಿ ಹಕ್ಕಿನ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

‘ಸೊರಬಕ್ಕೆ ಬಂದು ತೋರಿಸುತ್ತೇವೆ ಎಂದು ನೀವು ಹೇಳಿದ್ರೆ, ನಾವು ಶಿಕಾರಿಪುರಕ್ಕೆ ಬಂದು ತೋರಿಸುತ್ತೇವೆ’

ಪಕ್ಷದ ಸಂಘಟನೆ ಒಡೆಯಬೇಡಿ. ಯಾರೋ ಸೊರಬಕ್ಕೆ ಬಂದು ತೋರಿಸುತ್ತೇವೆ ಎಂದಿದ್ದಾರೆ. ನಾವು ಕೂಡ ಶಿಕಾರಿಪುರಕ್ಕೆ ಬಂದು ತೋರಿಸುತ್ತೇವೆ. ಬೇರೆಯವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುವುದು ನಮ್ಮ ಉದ್ದೇಶವಲ್ಲ. ವಿಜಯೇಂದ್ರ ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಿದ್ದರು. ಅವರ ತಂದೆ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ನಡೆದ ಬೆಳವಣಿಗೆ ಜನರು ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಪ್ರತಿನಿಧಿಗಳ ಬಗ್ಗೆ ತೀರ್ಮಾನಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೆರವು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರು ತಮ್ಮ ಮನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೇ ಕೇಳಿ ನೋಡಲಿ. ಗ್ಯಾರಂಟಿ ಯೋಜನೆಗಳು ಅವರ ಬದುಕಿಗೆ ಎಷ್ಟು ಸಹಕಾರಿಯಾಗಿವೆ ಎಂಬುದು ತಿಳಿಯುತ್ತದೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಮಧು ಬಂಗಾರಪ್ಪ ಹೇಳಿದರು.

ಈ ಸಮಾವೇಶಕ್ಕೂ ಮೊದಲು ನಡೆದ ಪಾದಯಾತ್ರೆಯಲ್ಲಿಯೂ ಕೂಡ ಶ್ರೀ ಮಧು ಬಂಗಾರಪ್ಪ ಭಾಗವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌, ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳಾದ ಗೋಪಿನಾಥ್ ಪಳನಿಯಪ್ಪನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಸಚಿವ ಸಂಪುಟದ ಸಹೋದ್ಯೋಗಿಗಳಾದ ಯತೀಂದ್ರ ಸಿದ್ದರಾಮಯ್ಯ,ಬಂಸವಂತಪ್ಪ, ರುದ್ರಪ್ಪ ಲಮಾಣಿ, ಪಕ್ಷದ ಹಿರಿಯ ನಾಯಕರಾದ ವಿ. ಎಸ್ ಉಗ್ರಪ್ಪ, ವಿಧಾನ ಪರಿಷತ್‌ ಸದಸ್ಯ ಬಲ್ಕೀಶ್‌ ಬಾನು, ಶಾಸಕ ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್ ಸಿ ಯೋಗೇಶ್, ಮಾಜಿ ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದರು.


Share It

You cannot copy content of this page