ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಆರೋಪಿಯಾಗಿರುವ ದರ್ಶನ್ ಅವರ ವಾದ ಮಾಡುವುದಕ್ಕೆ ಅನುಮತಿ ನೀಡದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿ ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಪರಿಗಣಿಸುವುದಾಗಿ ತಿಳಿಸಿತು.
ವಾದ ಮುಂದುವರೆಸಿದ ವಕೀಲರು, ಮಾಫಿ ಸಾಕ್ಷಿಗಳನ್ನು ಪರಿಗಣಿಸುವ ಸಂದರ್ಭದಲ್ಲಿ ಆಗಿರುವ ಪ್ರಕ್ರಿಯೆಯ ಲೋಪದೋಷಗಳ ಕುರಿತಂತೆ ವಾದ ಮಂಡಿಸಲು ಅವಕಾಶ ನೀಡಲಾಗಿತ್ತು. ಆದರೆ, ವಿಚಾರಣಾ ನ್ಯಾಯಾಲಯ ಇದಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಶೀಘ್ರ ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಅರ್ಜಿಯಲ್ಲೇನಿದೆ ? ಪ್ರಕರಣದ 14ನೇ ಆರೋಪಿ ಪ್ರದೂಷ್, ತಾನು ಈ ಕೊಲೆ ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧನಿದ್ದು, ತನಗೆ ಕ್ಷಮಾದಾನ ನೀಡಿ ‘ಅಪ್ರೂವರ್’ ಆಗಿ ಪರಿಗಣಿಸಬೇಕು ಎಂದು ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಿಸಲು ಹಾಗೂ ತಮ್ಮ ವಾದ ಮಂಡಿಸಲು ದರ್ಶನ್ ಮತ್ತು ಇತರ ಸಹ-ಆರೋಪಿಗಳ ಪರ ವಕೀಲರು ಸಮಯ ಕೋರಿದ್ದರು. ಆದರೆ, ಆಗಸ್ಟ್ 10, 2026 ರಂದು ಸೆಷನ್ಸ್ ನ್ಯಾಯಾಲಯವು ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿ ಮನವಿಯನ್ನು ತಿರಸ್ಕರಿಸಿತ್ತು.

