ನವದೆಹಲಿ: ಕಾವೇರಿ ನೀರು ಹರಿಸುವ ವಿಚಾರ ಕುರಿತು ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಕರ್ನಾಟಕ ಸರ್ಕಾರ, 2026-27 ಎಲ್ ನಿನೋ ಪರಿಣಾಮದಿಂದಾಗಿ ಮಳೆ ಕೊರತೆ ಅನುಭವಿಸುತ್ತಿದೆ. ಈ ನಡುವೆ ನೀರು ಹರಿಸುವಂತೆ ತಮಿಳುನಾಡು ಮನವಿ ಪರಿಗಣಿಸಿ CWRC ನೀಡಿದ್ದ ನಿರ್ದೇಶನ ಅನುಮೋದಿಸಿ CWMA ತಪ್ಪು ಮಾಡಿದೆ ಎಂದು ವಾದಿಸಿದೆ.
ನೀರು ಬಿಡುಗಡೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಗೆ ವಿರೋಧಿಸಿ, ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಮೋಹನ್ ವಿ. ಕಾತರಕಿ ಮತ್ತು ವಕೀಲ ನಿಶಾಂತ್ ಪಾಟೀಲ್ ಮೂಲಕ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶ ಭೌಗೋಳಿಕವಾಗಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಹರಿಡಿದೆ. ಈ ಪ್ರದೇಶಗಳು ಕರ್ನಾಟಕ ನೈಋತ್ಯ ಮುಂಗಾರು ಹಾಗೂ ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಾಯುವ್ಯ ಮುಂಗಾರು ಮಳೆ ಪ್ರಮಾಣ ಅವಲಂಬಿಸಿರುವ ಜಲಾನಯನ ಪ್ರದೇಶವಾಗಿದೆ.
ಈ ಬಾರಿ ಫೆಸಿಫಿಕ್ ಸಾಗರದಲ್ಲಿ ತಾಪಮಾನ ಏರಿಕೆಯಿಂದ ಉಂಟಾದ ಎಲ್ ನಿನೋ ಪರಿಣಾಮ, ಈ ವರ್ಷ ರಾಜ್ಯ ಜಲ ಸಂಕಷ್ಟಕ್ಕೆ ತುತ್ತಾಗಿದೆ. ಇದರ ಪರಿಣಾಮವಾಗಿ, ಜುಲೈ 28ರ ವೇಳೆಗೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿನ ನಾಲ್ಕು ಪ್ರಮುಖ ಜಲಾಶಯಗಳಿಗೆ ಬರುವ ನೀರಿನ ಒಳಹರಿವು ಸುಮಾರು ಶೇ. 65.76ರಷ್ಟು ಕಡಿಮೆಯಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಜುಲೈ 28ರಿಂದ ಆಗಸ್ಟ್ 12ರವರೆಗೆ ಮುಂದಿನ 15 ದಿನ ನಿತ್ಯ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಕರ್ನಾಟಕ 3,500 ಕ್ಯೂಸೆಕ್‌ನಷ್ಟು ನೀರು ಹರಿಸುವಂತೆ ಆದೇಶಿಸಿತು. ಸಿಡಬ್ಲ್ಯೂಆರ್ಸಿ ಸೂಚನೆಗೆ ಆಕ್ಷೇಪಣೆ ಸಲ್ಲಿಸಿ ರಾಜ್ಯ ಸಿಡಬ್ಲೂಎಂಎ ಮೊರೆ ಹೋಗಿತ್ತು. ಆದರೆ, ಜುಲೈ 30ರಂದು ಸಿಬ್ಲ್ಯೂಆರ್ಸಿ ಆದೇಶವನ್ನು ಸಿಡಬ್ಲ್ಯೂಎಂಎ ಎತ್ತಿ ಹಿಡಿಯಿತು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಸೂಚನೆಗಳ ನಡುವೆ ಅದೃಷ್ಟ ಎಂಬಂತೆ ಕೇರಳದ ವಯನಾಡ್ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬಂದಿದ್ದರಿಂದ ರಾಜ್ಯವು ತನ್ನ ಕಬಿನಿ ಜಲಾಶಯದಿಂದ ನೀರನ್ನು ಬಿಡಲು ಸಾಧ್ಯವಾಯಿತು. ಜುಲೈ 29 ರಿಂದ ಆಗಸ್ಟ್ 10ರವರೆಗೆ ರಾಜ್ಯ ತನ್ನ ಜಲಾಶಯದಿಂದ 1,64,080 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದೆ.

